ಲೈಂಗಿಕ ಕಿರುಕುಳ ಆರೋಪದಲ್ಲಿ ಮಮತಾ ಕೈವಾಡ: ಬಂಗಾಳ ರಾಜ್ಯಪಾಲರ ಗಂಭೀರ ಆರೋಪ
PC: PTI
ಕೊಲ್ಕತ್ತಾ: ರಾಜಭವನದ ಸಿಬ್ಬಂದಿಯೊಬ್ಬರು ನನ್ನ ವಿರುದ್ಧ ಮಾಡಿರುವ ಲೈಂಗಿಕ ಕಿರುಕುಳ ಆರೋಪದ ಹಿಂದೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಕೈವಾಡವಿದೆ ಎಂದು ರಾಜ್ಯಪಾಲ ಸಿ.ವಿ.ಆನಂದ ಬೋಸ್ ಗಂಭೀರ ಆರೋಪ ಮಾಡಿದ್ದಾರೆ.
"ಈ ಪರೋಕ್ಷ ಯುದ್ಧದಲ್ಲಿ ಮುಖ್ಯಮಂತ್ರಿಗಳು ದುಬಾರಿ ವೆಚ್ಚದ ವಕೀಲರ ಸೇವೆ ಪಡೆದು ಸಾರ್ವಜನಿಕ ಹಣ ದುರುಪಯೋಗ ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳ ಈ ಕ್ಷುಲ್ಲಕ ತಂತ್ರಗಳಿಗೆ ರಾಜ್ಯಪಾಲರು ಧೃತಿಗೆಡದೇ ಭ್ರಷ್ಟಾಚಾರ ಮತ್ತು ಹಿಂಸೆಯ ವಿರುದ್ಧದ ಹೋರಾಟವನ್ನು ಮುಂದುವರಿಸಿದ್ದಾರೆ" ಎಂದು ಎಕ್ಸ್ ಪೋಸ್ಟ್ ನಲ್ಲಿ ಬೋಸ್ ವಿವರಿಸಿದ್ದಾರೆ.
2024ರ ಮೇ ತಿಂಗಳ ಬಳಿಕ ಈ ಆರೋಪ ಬೆಳಕಿಗೆ ಬಂದಿದೆ ಎನ್ನುವುದು ಮಾಜಿ ನ್ಯಾಯಮೂರ್ತಿಗಳೊಬ್ಬರು ನಡೆಸಿದ ನ್ಯಾಯಾಂಗ ವಿಚಾರಣೆಯಿಂದ ದೃಢಪಟ್ಟಿದೆ ಎಂದು ಹೇಳಿದ್ದಾರೆ. ದೂರು ನೀಡಿದ ಮಹಿಳೆ ರಾಜಭವನದ ಪೊಲೀಸ್ ಹೊರಠಾಣೆಯಲ್ಲಿ ಎರಡು ಗಂಟೆಗಳನ್ನು ಕಳೆದಿದ್ದು, ಆ ಬಳಿಕ ಪೊಲೀಸ್ ಕಾರಿನಲ್ಲಿ ಅವರನ್ನು ಠಾಣೆಗೆ ಕರೆದೊಯ್ಯಲಾಗಿದೆ ಎಂದು ತನಿಖೆಯಿಂದ ದೃಢಪಟ್ಟಿದೆ ಎಂದು ಬೋಸ್ ಅವರ ಪೋಸ್ಟ್ ವಿವರಿಸಿದೆ.
ಅಲ್ಲಿ ನಿಯೋಜಿತರಾಗಿದ್ದ ಪೊಲೀಸ್ ಅಧಿಕಾರಿ ಆರೋಪಿಯ ಜತೆ ಹಾಗೂ ರಾಜ್ಯಪಾಲರ ವಿರುದ್ಧ ಸುಳ್ಳು ಕಥೆ ಹೆಣೆಯುವಲ್ಲಿ ಸಹಕರಿಸಿದ ಇತರ ಅಪರಿಚಿತ ವ್ಯಕ್ತಿಗಳ ಜತೆ ನಿಕಟ ನಂಟು ಹೊಂದಿದ್ದರು. ಆದ್ದರಿಂದ ಈ ಕಥಾನಕ ಹೊರಬರುವಲ್ಲಿ ಪೊಲೀಸರು ಪ್ರಮುಖ ಪಾತ್ರ ವಹಿಸಿದ್ದಾರೆ" ಎಂದು ಆರೋಪಿಸಿದ್ದಾರೆ.