ಭಾರತ - ದಕ್ಷಿಣ ಆಫ್ರಿಕಾ ನಡುವಿನ ಕ್ರಿಕೆಟ್ ಪಂದ್ಯದ ಟಿಕೆಟ್ ಅನ್ನು ಮರಳಿಸಿದ ಪಶ್ಚಿಮ ಬಂಗಾಳ ರಾಜ್ಯಪಾಲ; ಕಾರಣವೇನು ಗೊತ್ತೇ?
ಪಶ್ಚಿಮ ಬಂಗಾಳ ರಾಜ್ಯಪಾಲ ಸಿ.ವಿ.ಆನಂದ್ ಬೋಸ್ (PTI)
ಕೋಲ್ಕತ್ತಾ: ಕಾಳ ಸಂತೆಯಲ್ಲಿ ಟಿಕೆಟ್ ಮಾರಾಟವಾಗುತ್ತಿದೆ ಎಂಬ ವದಂತಿಗಳು ಹಬ್ಬಿರುವ ಬೆನ್ನಿಗೇ, ಇಲ್ಲಿನ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ಆಯೋಜನೆಗೊಂಡಿರುವ ಬಹು ನಿರೀಕ್ಷಿತ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪಂದ್ಯವನ್ನು ವೀಕ್ಷಿಸಲು ಪಡೆಯಲಾಗಿದ್ದ ನಾಲ್ಕು ಟಿಕೆಟ್ ಗಳನ್ನು ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ.ಆನಂದ್ ಬೋಸ್ ಮರಳಿಸಿದ್ದಾರೆ ಎಂದು ರಾಜಭವನದ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದ ಟಿಕೆಟ್ ಅನ್ನು ಬಂಗಾಳ ಕ್ರಿಕೆಟ್ ಒಕ್ಕೂಟವು ರಾಜ್ಯಪಾಲರಿಗೆ ಒದಗಿಸಿತ್ತು.
“ರಾಜ್ಯಪಾಲರು ತಮಗೆ ದೊರೆತಿದ್ದ ಗೌರವದ ಟಿಕೆಟ್ ಗಳನ್ನು ಬಂಗಾಳ ಕ್ರಿಕೆಟ್ ಒಕ್ಕೂಟಕ್ಕೆ ಮರಳಿಸಿದ್ದಾರೆ. ಅವರು ರಾಜಭವನದಲ್ಲಿ ‘ಜನತಾ ಕ್ರೀಡಾಂಗಣ’ವನ್ನು ತೆರೆಯಲು ನಿರ್ಧರಿಸಿದ್ದು, ಅಲ್ಲಿ ಜನರು ಬೃಹತ್ ಪರದೆಯ ಮೇಲೆ ಪಂದ್ಯವನ್ನು ವೀಕ್ಷಿಸಬಹುದಾಗಿದೆ” ಎಂದು ರಾಜಭವನದ ಅಧಿಕಾರಿಯೊಬ್ಬರು PTI ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಮೊದಲು ಬಂದವರಿಗೆ ಆದ್ಯತೆ ಆಧಾರದಲ್ಲಿ ಒಟ್ಟು 500 ಮಂದಿಗೆ ಪಂದ್ಯವನ್ನು ವೀಕ್ಷಿಸಲು ಪ್ರವೇಶ ನೀಡಲಾಗುತ್ತದೆ ಎಂದು ಅವರು ಹೇಳಿದ್ದಾರೆ. ರಾಜಭವನದ ಹುಲ್ಲುಹಾಸಿನ ಪ್ರವೇಶಕ್ಕೆ ಕ್ರಿಕೆಟ್ ಪ್ರೇಮಿಗಳು ಆನ್ ಲೈನ್ ನಲ್ಲೂ ಅರ್ಜಿ ಸಲ್ಲಿಸಬಹುದಾಗಿದೆ.
ರವಿವಾರ ನಡೆಯಲಿರುವ ಪಂದ್ಯದ ಟಿಕೆಟ್ ಗಳು ಕಾಳ ಸಂತೆಯಲ್ಲಿ ಮಾರಾಟವಾಗುತ್ತಿವೆ ಎಂಬ ಹಲವಾರು ದೂರುಗಳು ರಾಜಭವನದ ಕುಂದುಕೊರತೆ ಘಟಕಕ್ಕೆ ಬಂದ ಹಿನ್ನೆಲೆಯಲ್ಲಿ ರಾಜ್ಯಪಾಲ ಸಿ.ವಿ.ಆನಂದ್ ಬೋಸ್ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಹೇಳಲಾಗಿದೆ.
ನವೆಂಬರ್ 1ರಿಂದ ಇಲ್ಲಿಯವರೆಗೆ ಕಾನೂನುಬಾಹಿರವಾಗಿ ಟಿಕೆಟ್ ಮಾರಾಟ ಮಾಡುತ್ತಿದ್ದ 19 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.