ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ರಾಜ್ಯಗಳಲ್ಲಿ NIA ದಾಳಿ
ರಾಮೇಶ್ವರಂ ಕೆಫೆ , ಎನ್ಐಎ
ಹೊಸದಿಲ್ಲಿ: ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ರಾಷ್ಟ್ರೀಯ ತನಿಖಾ ದಳವು (ಎನ್ಐಎ) ಹಲವು ರಾಜ್ಯಗಳಲ್ಲಿ ದಾಳಿ ನಡೆಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಾರ್ಚ್ 1ರಂದು ಐಟಿ ನಗರವಾದ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ್ದ ಬಾಂಬ್ ಸ್ಫೋಟದಿಂದ ದೊಡ್ಡ ಮಟ್ಟದ ಹಾನಿಯುಂಟಾಗಿ, ಹೋಟೆಲ್ ನ ಹಲವಾರು ಗ್ರಾಹಕರು ಮತ್ತು ಸಿಬ್ಬಂದಿಗಳು ಗಾಯಗೊಂಡಿದ್ದರು. ಈ ಪೈಕಿ ಕೆಲವರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದವು.
“ವಿವಿಧ ಸ್ಥಳಗಳಲ್ಲಿ ದಾಳಿಯು ಪ್ರಗತಿಯಲ್ಲಿದೆ” ಎಂದು ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳದೆ ಎನ್ಐಎ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಾರ್ಚ್ 3ರಂದು ಈ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದ್ದ ತನಿಖಾ ಸಂಸ್ಥೆಯು, ಎಪ್ರಿಲ್ 12ರಂದು ಸ್ಫೋಟದ ಸೂತ್ರಧಾರ ಅಬ್ದುಲ್ ಮದೀನ್ ಅಹ್ಮದ್ ತಾಹಾ ಸೇರಿದಂತೆ ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಿತ್ತು.
ರಾಮೇಶ್ವರಂ ಕೆಫೆಯಲ್ಲಿ ಸುಧಾರಿತ ಸ್ಫೋಟಕವನ್ನಿರಿಸಿದ್ದ ತಾಹಾ ಹಾಗೂ ಮತ್ತೊಬ್ಬ ಆರೋಪಿ ಮುಸವಿರ್ ಹುಸೈನ್ ಶಾಝಿದ್ ನನ್ನು ಕೋಲ್ಕತ್ತಾದ ಬಳಿಯಿರುವ ಲಾಡ್ಜ್ ಒಂದರಿಂದ ಬಂಧಿಸಲಾಗಿತ್ತು.