ಭಾರತದಲ್ಲಿ 2001-2023ರ ನಡುವಿನ ಅವಧಿಯಲ್ಲಿ 23 ಲಕ್ಷ ಹೆಕ್ಟೇರ್ ಅರಣ್ಯ ಪ್ರದೇಶ ನಾಶ | ಗ್ಲೋಬಲ್ ಫಾರೆಸ್ಟ್ ವಾಚ್ ವರದಿ
ಅತೀ ಹೆಚ್ಚು ಅರಣ್ಯ ನಾಶವಾಗಿರುವುದು ಅಸ್ಸಾಮಿನಲ್ಲಿ!
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: 2001 ಮತ್ತು 2023ರ ನಡುವಿನ ಅವಧಿಯಲ್ಲಿ ಭಾರತವು 23 ಲಕ್ಷ ಹೆಕ್ಟೇರ್ ಪ್ರದೇಶವನ್ನು ವ್ಯಾಪಿಸುವಷ್ಟು ಮರಗಳನ್ನು ಕಳೆದುಕೊಂಡಿದೆ ಎಂದು ಗ್ಲೋಬಲ್ ಫಾರೆಸ್ಟ್ ವಾಚ್ನ ಶುಕ್ರವಾರ ಬಿಡುಗಡೆಯಾದ ವರದಿಯೊಂದು ತಿಳಿಸಿದೆ. 2000ದ ಬಳಿಕ ಅರಣ್ಯ ಪ್ರದೇಶವು 6 ಶೇಕಡದಷ್ಟು ಕಡಿಮೆಯಾಗಿದೆ ಎಂದು ಅದು ಹೇಳಿದೆ.
2001 ಮತ್ತು 2023ರ ನಡುವಿನ ಅವಧಿಯಲ್ಲಿ ಭಾರತದಲ್ಲಿ ನಾಶವಾದ ಅರಣ್ಯ ಪ್ರದೇಶದ 60 ಶೇಕಡ ಭಾಗ ಈಶಾನ್ಯದ ಐದು ರಾಜ್ಯಗಳಲ್ಲಿತ್ತು ಎಂದು ವರದಿ ತಿಳಿಸಿದೆ.
ಗರಿಷ್ಠ ಪ್ರಮಾಣದ ಮರಗಳ ನಾಶ ಸಂಭವಿಸಿರುವುದು ಅಸ್ಸಾಮಿನಲ್ಲಿ! ಅಲ್ಲಿ 3,24,000 ಹೆಕ್ಟೇರ್ ಅರಣ್ಯ ಪ್ರದೇಶ ನಾಶವಾಗಿದೆ. ಈ ಅವಧಿಯಲ್ಲಿ ರಾಜ್ಯಗಳ ಸರಾಸರಿ ಅರಣ್ಯ ನಾಶ ಪ್ರಮಾಣದ 66,000 ಹೆಕ್ಟೇರ್ ಆಗಿತ್ತು. ಈ ಅವಧಿಯಲ್ಲಿ ಮಿಜೋರಾಮ್ನಲ್ಲಿ 3,12,000 ಹೆಕ್ಟೇರ್ ಅರಣ್ಯ ಪ್ರದೇಶ ನಾಶವಾದರೆ, ಅರುಣಾಚಲಪ್ರದೇಶದಲ್ಲಿ 2,62,000 ಹೆಕ್ಟೇರ್, ನಾಗಾಲ್ಯಾಂಡ್ನಲ್ಲಿ 2,59,000 ಹೆಕ್ಟೇರ್ ಮತ್ತು ಮಣಿಪುರದಲ್ಲಿ 2,40,000 ಹೆಕ್ಟೇರ್ ಪ್ರದೇಶದಲ್ಲಿದ್ದ ಮರಗಳು ನಾಶವಾಗಿವೆ.