ಮೊದಲ ಬಾರಿಗೆ ವಿಧಾನಸಭೆಗೆ ಆಯ್ಕೆಯಾದ ಭಜನ್ ಲಾಲ್ ಶರ್ಮಾ ರಾಜಸ್ಥಾನದ ನೂತನ ಮುಖ್ಯಮಂತ್ರಿ
ದಿಯಾ ಕುಮಾರಿ ಮತ್ತು ಪ್ರೇಮ್ ಚಂದ್ ಉಪಮುಖ್ಯಮಂತ್ರಿಗಳಾಗಿ ಆಯ್ಕೆ

ಭಜನ್ ಲಾಲ್ ಶರ್ಮಾ
ಜೈಪುರ: ರಾಜಸ್ಥಾನದ ನೂತನ ಮುಖ್ಯಮಂತ್ರಿಯನ್ನಾಗಿ ಭಜನ್ ಲಾಲ್ ಶರ್ಮ ಅವರನ್ನು ಆಯ್ಕೆಮಾಡಲಾಗಿದೆ ಎಂದು ಬಿಜೆಪಿ ಇಂದು ಘೋಷಿಸಿದೆ. ಸಂಗನೇರ್ ವಿಧಾನಸಭಾ ಕ್ಷೇತ್ರದಿಂದ ಶರ್ಮ ಚುನಾವಣೆ ಗೆದ್ದಿದ್ದರು. ಅವರ ಆಯ್ಕೆಯನ್ನು ಸಿಎಂ ಹುದ್ದೆ ಆಕಾಂಕ್ಷಿಗಳಲ್ಲಿ ಒಬ್ಬರಾಗಿದ್ದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಸಿಂಧಿಯಾ ಅವರು ಘೋಷಿಸಿದರು.
ಮುಖ್ಯಮಂತ್ರಿ ರೇಸ್ನಲ್ಲಿ ಮಾಜಿ ಸಿಎಂ ವಸುಂಧರಾ ರಾಜೆ ಸೇರಿದಂತೆ ಹಲವು ಘಟಾನುಘಟಿ ನಾಯಕರಿದ್ದರೂ ಬಿಜೆಪಿ ಭಜನ್ ಲಾಲ್ ಶರ್ಮಾ ಅವರಿಗೆ ಮಣೆ ಹಾಕಿದೆ.
ಭಜನ್ ಲಾಲ್ ಶರ್ಮಾ ಮೊದಲ ಬಾರಿಗೆ ವಿಧಾನಸಭೆಗೆ ಆಯ್ಕೆಯಾಗಿದ್ದು, ಚೊಚ್ಚಲ ಗೆಲುವಿನಲ್ಲೇ ಮುಖ್ಯಮಂತ್ರಿ ಹುದ್ದೆ ನೀಡಿರುವ ಬಿಜೆಪಿ ನಡೆ ತೀವ್ರ ಕುತೂಹಲ ಹುಟ್ಟಿಸಿದೆ.
ಇಬ್ಬರು ಉಪಮುಖ್ಯಮಂತ್ರಿಗಳನ್ನೂ ಆಯ್ಕೆ ಮಾಡಲಾಗಿದೆ ಎಂದು ಕೇಂದ್ರ ವೀಕ್ಷಕರ ತಂಡದ ನೇತೃತ್ವ ವಹಿಸಿದ್ದ ಬಿಜೆಪಿಯ ಹಿರಿಯ ನಾಯಕ ರಾಜನಾಥ್ ಸಿಂಗ್ ತಿಳಿಸಿದ್ದಾರೆ. ದಿಯಾ ಕುಮಾರಿ ಮತ್ತು ಪ್ರೇಮ್ ಚಂದ್ ಬೈರ್ವಾ ಅವರು ಉಪಮುಖ್ಯಮಂತ್ರಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಶಾಸಕ ವಸುದೇವ್ ದೇವ್ನಾನಿ ಅವರನ್ನು ಸ್ಪೀಕರ್ ಆಗಿ ಆಯ್ಕೆಮಾಡಲಾಗಿದೆ. ಆಜ್ಮೀರ್ ಮೂಲದವರಾದ ಅವರು ಹಿಂದಿನ ಸರ್ಕಾರದಲ್ಲಿ ಶಿಕ್ಷಣ ಸಚಿವರಾಗಿದ್ದರು.
ನೂತನ ಸಿಎಂ ಆಗಿ ಆಯ್ಕೆಯಾಗಿರುವ ಭಜನ್ ಲಾಲ್ ಶರ್ಮ ಅವರು ಈ ಹಿಂದೆ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ ನಾಲ್ಕು ಅವಧಿಗೆ ಸೇವೆ ಸಲ್ಲಿಸಿದ್ದರು.
ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಅವರು ಆರೆಸ್ಸೆಸ್ ಮತ್ತು ABVP ಹಿನ್ನೆಲೆ ಹೊಂದಿದವರು. ಭರತಪುರ್ ಮೂಲದವರಾಗಿರುವ ಅವರು ಸಂಗನೇರ್ನಲ್ಲಿ ಜೈಪುರದ ಮಾಜಿ ಮೇಯರ್ ಅಶೋಕ್ ಲಹೋಟ್ ಅವರನ್ನು ಸೋಲಿಸಿದ್ದರು.