ಬಿಜೆಪಿಯ ‘‘ಗೂಂಡಾಗಳಿಂದ’’ ಭಾರತ್ ಜೋಡೊ ನ್ಯಾಯ ಯಾತ್ರೆಯ ಮೇಲೆ ಆಕ್ರಮಣ ; ಕಾಂಗ್ರೆಸ್ ಆರೋಪ
ಭಾರತ್ ಜೋಡೊ |Photo:PTI
ಹೊಸದಿಲ್ಲಿ: ಅಸ್ಸಾಮ್ ನಲ್ಲಿ ಭಾರತ್ ಜೋಡೊ ನ್ಯಾಯ ಯಾತ್ರೆಯ ಮೇಲೆ ‘‘ಬಿಜೆಪಿಯ ಗೂಂಡಾಗಳು’’ ನಡೆಸಿರುವ ಆಕ್ರಮಣವನ್ನು ಕಾಂಗ್ರೆಸ್ ಶನಿವಾರ ಖಂಡಿಸಿದೆ. ಭಾರತದ ಜನರಿಗೆ ಸಂವಿಧಾನವು ನೀಡಿರುವ ಪ್ರತಿಯೊಂದು ಹಕ್ಕು ಮತ್ತು ನ್ಯಾಯವನ್ನು ರಾಜ್ಯದ ಆಡಳಿತಾರೂಢ ಪಕ್ಷವು ‘‘ತುಳಿಯಲು ಮತ್ತು ಧ್ವಂಸಗೊಳಿಸಲು’’ ನೋಡುತ್ತಿದೆ ಎಂದು ಅದು ಆರೋಪಿಸಿದೆ.
ತನ್ನ ಕಾರ್ಯಕರ್ತರು ಮತ್ತು ನಾಯಕರನ್ನು ಬೆದರಿಸುವ ಉದ್ದೇಶದ ಇಂಥ ತಂತ್ರಗಾರಿಕೆಗಳಿಗೆ ಕಾಂಗ್ರೆಸ್ ಮಣಿಯುವುದಿಲ್ಲ ಎಂದು ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
‘‘ಅಸ್ಸಾಮ್ ನ ಲಖೀಮ್ಪುರ್ನಲ್ಲಿ ಭಾರತ್ ಜೋಡೊ ನ್ಯಾಯ ಯಾತ್ರೆಯ ವಾಹನಗಳ ಮೇಲೆ ಬಿಜೆಪಿ ಗೂಂಡಾಗಳು ನಡೆಸಿರುವ ದಾಳಿಯನ್ನು ಮತ್ತು ಪಕ್ಷದ ಭಿತ್ತಿಪತ್ರಗಳನ್ನು ಹರಿದು ಹಾಕಿರುವುದನ್ನು ನಾವು ಬಲವಾಗಿ ಖಂಡಿಸುತ್ತೇವೆ’’ ಎಂದು ಅವರು ‘ಎಕ್ಸ್’ನಲ್ಲಿ ಹಾಕಿದ ಸಂದೇಶವೊಂದರಲ್ಲಿ ಹೇಳಿದ್ದಾರೆ.
‘‘ಕಳೆದ 10 ವರ್ಷಗಳಲ್ಲಿ, ಭಾರತದ ಜನರಿಗೆ ಸಂವಿಧಾನವು ನೀಡಿರುವ ಪ್ರತಿಯೊಂದು ಹಕ್ಕು ಮತ್ತು ನ್ಯಾಯವನ್ನು ತುಳಿಯಲು ಮತ್ತು ಧ್ವಂಸಗೊಳಿಸಲು ಬಿಜೆಪಿಯು ಪ್ರಯತ್ನಿಸಿದೆ. ಆ ಪಕ್ಷವು ಜನರ ಧ್ವನಿಗಳನ್ನು ಹತ್ತಿಕ್ಕಲು ಹಾಗೂ ಆ ಮೂಲಕ ಪ್ರಜಾಪ್ರಭುತ್ವವನ್ನು ಅಪಹರಿಸಲು ಬಯಸಿದೆ’’ ಎಂದು ಅವರು ಆರೋಪಿಸಿದ್ದಾರೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಕೂಡ ದಾಳಿಯನ್ನು ತೋರಿಸುತ್ತದೆ ಎನ್ನಲಾಗಿರುವ ವೀಡಿಯೊವೊಂದನ್ನು ‘ಎಕ್ಸ್’ನಲ್ಲಿ ಹಂಚಿಕೊಂಡಿದ್ದಾರೆ. ‘‘ಅತ್ಯಂತ ಭ್ರಷ್ಟ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಭಾರತ್ ಜೋಡೊ ನ್ಯಾಯ ಯಾತ್ರೆಯ ಬಗ್ಗೆ ಎಷ್ಟೊಂದು ಹೆದರಿಕೊಂಡಿದ್ದಾರೆ ಎನ್ನುವುದಕ್ಕೆ ಇದಕ್ಕಿಂತ ಬೇರೆ ಪುರಾವೆ ಬೇಕೇ? ನಮ್ಮ ಭಿತ್ರಿಪತ್ರಗಳು ಮತ್ತು ವಾಹನಗಳ ಮೇಲೆ ದಾಳಿ ಮಾಡುತ್ತಿರುವ ಈ ಗೂಂಡಾಗಳನ್ನು ನೋಡಿ!’’ ಎಂದು ಅವರು ಬರೆದಿದ್ದಾರೆ.
ಭಿತ್ತಿಪತ್ರಗಳನ್ನು ಹರಿದು ಹಾಕಿದ ದುಷ್ಕರ್ಮಿಗಳು
ಅಸ್ಸಾಮ್ ನ ಉತ್ತರ ಲಖೀಮ್ಪುರ ಪಟ್ಟಣಕ್ಕೆ ಭಾರತ್ ಜೋಡೊ ನ್ಯಾಯ ಯಾತ್ರೆಯನ್ನು ಸ್ವಾಗತಿಸುವ ಭಿತ್ತಿಪತ್ರಗಳನ್ನು ಹರಿದು ಹಾಕಲಾಗಿದೆ ಮತ್ತು ವಾಹನಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಕಾಂಗ್ರೆಸ್ ಶನಿವಾರ ಆರೋಪಿಸಿದೆ.
ಅಸ್ಸಾಮ್ ನ ಪಟ್ಟಣವೊಂದರ ಬೀದಿಯದ್ದು ಎನ್ನಲಾದ ರಾತ್ರಿ ತೆಗೆದ 54 ಸೆಕೆಂಡ್ ಗಳ ವೀಡಿಯೊವೊಂದನ್ನು ಪಕ್ಷ ಬಿಡುಗಡೆಗೊಳಿಸಿದೆ. ಜನರು ‘ಜೈಶ್ರೀರಾಮ್’’ ಎಂಬ ಘೋಷಣೆಗಳನ್ನು ಕೂಗುವುದು ಆ ವೀಡಿಯೊದಲ್ಲಿ ಕಾಣುತ್ತದೆ. ಕೋಲು ಬೀಸುವ ವ್ಯಕ್ತಿಯೊಬ್ಬ ಕಂಬಗಳಲ್ಲಿ ಹಾಕಲಾಗಿರುವ ಭಿತ್ರಿಪತ್ರಗಳನ್ನು ಹರಿಯುವುದನ್ನು ವೀಡಿಯೊ ತೋರಿಸುತ್ತದೆ.
ರಾಹುಲ್ ಗಾಂಧಿ ಮತ್ತು ಇತರ ಇಬ್ಬರು ಕಾಂಗ್ರೆಸ್ ನಾಯಕರ ಚಿತ್ರಗಳನ್ನು ಒಳಗೊಂಡ ಇನ್ನೊಂದು ಭಿತ್ತಿಪತ್ರವನ್ನು ಇನ್ನೋರ್ವ ವ್ಯಕ್ತಿ ಕೆಳಗೆ ಎಳೆಯುವುದನ್ನೂ ವೀಡಿಯೊ ತೋರಿಸುತ್ತದೆ.
ಕಾಂಗ್ರೆಸ್ ಧ್ವಜಗಳನ್ನು ಹೊತ್ತ ಎರಡು ವಾಹನಗಳ ಮೇಲೆ ದುಷ್ಕರ್ಮಿಗಳು ದಾಳಿ ನಡೆಸುವ ಇನ್ನೊಂದು ವೀಡಿಯೊವನ್ನು ಅಸ್ಸಾಮ್ ಕಾಂಗ್ರೆಸ್ ಶನಿವಾರ ಬಿಡುಗಡೆಗೊಳಿಸಿದೆ. ಎರಡೂ ವಾಹನಗಳ ಗಾಜುಗಳು ಒಡೆದಿವೆ.
ಅಸ್ಸಾಮ್ ನಲ್ಲಿ 3ನೇ ದಿನ ಪೂರೈಸಿದ ಯಾತ್ರೆ
ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೊ ನ್ಯಾಯ ಯಾತ್ರೆಯು ತನ್ನ ಅಸ್ಸಾಮ್ ರಾಜ್ಯದ ಮೂರನೇ ದಿನದ ಯಾತ್ರೆಯನ್ನು ಶನಿವಾರ ಪೂರೈಸಿದೆ. ಶನಿವಾರ ರಾಜ್ಯದ ಲಖಿಮ್ಪುರದಲ್ಲಿರುವ ಬೊಗಿನಾಡಿಯಿಂದ ಯಾತ್ರೆಯು ಹೊರಟಿತು.
ರಾಹುಲ್ ಗಾಂಧಿ ಆಸೀನರಾಗಿರುವ ಬಸ್ ಯಾತ್ರೆಯ ಮುಂಭಾಗದಲ್ಲಿ ಚಲಿಸಿತು. ರಸ್ತೆಯಲ್ಲಿ ನೆರೆದವರು ಗಾಂಧಿಯತ್ತ ಕೈಬೀಸಿದರು.
ರಾಹುಲ್ ಗಾಂಧಿ ಎರಡು ಸ್ಥಳಗಳಲ್ಲಿ ಬಸ್ನಿಂದ ಇಳಿದು ಜನರೊಂದಿಗೆ ಮಾತನಾಡಿದರು ಮತ್ತು ಅವರೊಂದಿಗೆ ಸ್ವಲ್ಪ ದೂರ ನಡೆದರು.
ಯಾತ್ರೆಯು ಮಧ್ಯಾಹ್ನ ಗುಮ್ಟೊ ಮೂಲಕ ಅರುಣಾಚಲಪ್ರದೇಶವನ್ನು ಪ್ರವೇಶಿಸಿತು.