ಮತಪತ್ರಗಳ ಮೂಲಕ ಮತದಾನಕ್ಕೆ ಒತ್ತಾಯಿಸಲು ಶೀಘ್ರವೇ ಭಾರತ ಜೋಡೊ ಮಾದರಿಯಲ್ಲಿ ಜನಾಂದೋಲನ: ಪಟೋಲ್
ನಾನಾ ಪಟೋಲ್ | PC : PTI
ಮುಂಬೈ : ಇವಿಎಂಗಳಳ ಬದಲು ಮತಪತ್ರಗಳ ಮೂಲಕ ಮತದಾನಕ್ಕೆ ಒತ್ತಾಯಿಸಲು ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸಲು ಭಾರತ ಜೋಡೊ ಮಾದರಿಯಲ್ಲಿ ಬೃಹತ್ ಜನಾಂದೋಲನವನ್ನು ಶೀಘ್ರವೇ ಆರಂಭಿಸಲಾಗುವುದು ಎಂದು ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ಹಾಗೂ ಮಾಜಿ ಸ್ಪೀಕರ್ ನಾನಾ ಪಟೋಲ್ ಯವರು ಬುಧವಾರ ಇಲ್ಲಿ ತಿಳಿಸಿದರು.
ಆಂದೋಲನವು ಸೊಲ್ಲಾಪುರ ಜಿಲ್ಲೆಯ ಮಾಳಶಿರಸ್ ತಾಲೂಕಿನ ಮರ್ಕಡವಾಡಿ ಗ್ರಾಮದಿಂದ ಆರಂಭವಾಗಲಿದೆ ಎಂದರು.
ಮರ್ಕಡ್ವಾಡಿ ಗ್ರಾಮವು ಇವಿಎಂ ವಿರುದ್ಧ ಅಭಿಯಾನದ ಉಗಮ ಕೇಂದ್ರವಾಗಿ ಹೊರಹೊಮ್ಮಿದೆ.
ರಾಜ್ಯಾದ್ಯಂತ ಗ್ರಾಮಗಳು ಈಗ ಮತಪತ್ರಗಳ ಮೂಲಕ ಮತದಾನಕ್ಕೆ ಒತ್ತಾಯಿಸುವ ನಿರ್ಣಯಗಳನ್ನು ಗ್ರಾಮಸಭೆಗಳಲ್ಲಿ ಅಂಗೀಕರಿಸುತ್ತಿವೆ. ಮರ್ಕಡವಾಡಿಯಲ್ಲಿ ಆರಂಭಗೊಂಡ ಪ್ರತಿಭಟನೆ ರಾಜ್ಯಾದ್ಯಂತ ಹಬ್ಬುತ್ತಿದೆ. ಸಾಂಗ್ಲಿ ಜಿಲ್ಲೆಯ ಕೋಲೆವಾಡಿ ಮತ್ತು ರಾಯಗಡ ಜಿಲ್ಲೆಯ ಮಂಗಾಂವ್ನಂತಹ ಗ್ರಾಮಗಳಲ್ಲಿ ಪ್ರತಿಭಟನೆಗಳು ಭುಗಿಲೆದ್ದಿದ್ದು,ಇದೀಗ ರಾಷ್ಟ್ರವ್ಯಾಪಿ ಆಂದೋಲನವಾಗುತ್ತಿದೆ ಎಂದು ಹೇಳಿದ ಪಟೋಲೆ,ನೆರೆಯ ದೇಶಗಳಲ್ಲಿ ಪ್ರಜಾಪ್ರಭುತ್ವಗಳನ್ನು ಕಿತ್ತು ಹಾಕುತ್ತಿದ್ದರೆ ಭಾರತದಲ್ಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಗಳನ್ನು ದುರ್ಬಲಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ. ಪ್ರಜಾಪ್ರಭುತ್ವದಲ್ಲಿ ಮತದಾರನನ್ನು ಪ್ರಭು ಎಂದು ಪರಿಗಣಿಸಲಾಗುತ್ತದೆ,ಆದರೆ ಈಗ ಈ ಪ್ರಭುವಿನ ಮತವನ್ನೇ ಕಳ್ಳತನ ಮಾಡಲಾಗುತ್ತಿದೆ ಎಂದರು.
ಜನರಲ್ಲಿ ಇವಿಎಮ್ಗಳ ಕುರಿತು ಶಂಕೆಗಳಿವೆ,ಇದೇ ಕಾರಣದಿಂದ ಪಾರದರ್ಶಕತೆಯನ್ನು ಖಚಿತಪಡಿಸಲು ಮತಪತ್ರಗಳ ಮೂಲಕ ಮತದಾನಕ್ಕೆ ಆಗ್ರಹಿಸಿರುವ ಮರ್ಕಡವಾಡಿಯ ಜನರು ದೇಶಕ್ಕೆ ಮಾರ್ಗವನ್ನು ತೋರಿಸಿದ್ದಾರೆ ಎಂದ ಅವರು,ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗಳಲ್ಲಿಯ ಅಚ್ಚರಿದಾಯಕ ಫಲಿತಾಂಶಗಳು ಚುನಾವಣಾ ಪ್ರಕ್ರಿಯೆಯ ಬಗ್ಗೆಯೇ ಪ್ರಶ್ನೆಗಳನ್ನೆತ್ತಿವೆ ಎಂದರು.