ಭೋಪಾಲ್: ಅಂಗಡಿಯಲ್ಲಿ ದಾಂಧಲೆ ನಡೆಸಿದ ಆರೋಪಿಗಳ ಮೆರವಣಿಗೆ

PC : ANI
ಭೋಪಾಲ : ಅಂಗಡಿ ಮಾಲೀಕರ ಮೇಲೆ ಹಲ್ಲೆ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿ ಮಧ್ಯಪ್ರದೇಶ ಪೊಲೀಸರು ನಾಲ್ವರು ಕುಖ್ಯಾತ ಪಾತಕಿಗಳನ್ನು ಬಂಧಿಸಿದ್ದಾರೆ ಮತ್ತು ಶುಕ್ರವಾರ ಸಂಜೆ ರಾಜ್ಯ ರಾಜಧಾನಿ ಭೋಪಾಲ್ನಲ್ಲಿ ಅವರ ಮೆರವಣಿಗೆ ಮಾಡಿದ್ದಾರೆ.
ಬಂಧಿತ ಪಾತಕಿಗಳ ವಿರುದ್ಧ ಹಿಂದೆಯೂ ಹಲವು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತರನ್ನು ರೋಹಿತ್ ಕಬೀರ್ಪಂಥಿ ಯಾನೆ ಬಲಿ (24), ಅಸಾದ್ ಖಾನ್ ಯಾನೆ ಚಿನ್ನು (25), ನಿತೀಶ್ ಕತ್ಯಾರೆ ಯಾನೆ ನಿಕ್ಕಿ (23) ಮತ್ತು ದಕ್ಷ ಬುಂದೇಲ (19) ಎಂಬುದಾಗಿ ಗುರುತಿಸಲಾಗಿದೆ.
ಮೆರವಣಿಗೆಯ ವೇಳೆ, ಆರೋಪಿಗಳು ತಮ್ಮ ದುಷ್ಕೃತ್ಯಗಳಿಗೆ ಜನರಿಂದ ಕ್ಷಮೆ ಕೋರಿದರು ಮತ್ತು ಇನ್ನು ನಾವೆಂದೂ ಅಪರಾಧ ಮಾಡುವುದಿಲ್ಲ ಎಂಬು ಭರವಸೆಯನ್ನು ನೀಡಿದರು.
ಜನವರಿ 22ರಂದು, ಆರೋಪಿಗಳು ನಗರದದ ಟಿಟಿ ನಗರ ಪೊಲೀಸ್ ವ್ಯಾಪ್ತಿಯಲ್ಲಿ ಅಂಗಡಿಗಳಲ್ಲಿ ದಾಂಧಲೆ ನಡೆಸಿ ಇಬ್ಬರು ಅಂಗಡಿ ಮಾಲೀಕರ ಮೇಲೆ ಹಲ್ಲೆ ನಡೆಸಿದ್ದರು ಎಂದು ಪೊಲೀಸರು ಆರೋಪಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಈವರೆಗೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಇಬ್ಬರು ತಪ್ಪಿಸಿಕೊಂಡಿದ್ದಾರೆ.