ಮಧ್ಯಪ್ರದೇಶ | ಪ್ರತಿಭಟನೆ ವೇಳೆ ವೇದಿಕೆ ಕುಸಿದು ಕನಿಷ್ಠ 7 ಮಂದಿ ಕಾಂಗ್ರೆಸ್ ನಾಯಕರಿಗೆ ಗಾಯ

Photo | freepressjournal
ಭೋಪಾಲ್ : ಮಧ್ಯಪ್ರದೇಶದ ಭೋಪಾಲ್ನ ರಂಗಮಹಲ್ ಚೌಕ್ನಲ್ಲಿ ಕಾಂಗ್ರೆಸ್ ಆಯೋಜಿಸಿದ್ದ ಪ್ರತಿಭಟನೆ ವೇಳೆ ವೇದಿಕೆ ಕುಸಿದು ಕನಿಷ್ಠ 7 ಮಂದಿ ಕಾಂಗ್ರೆಸ್ ನಾಯಕರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಗಾಯಗೊಂಡವರಲ್ಲಿ ಮಧ್ಯಪ್ರದೇಶ ಕಾಂಗ್ರೆಸ್ ರೈತ ವಿಭಾಗದ ಅಧ್ಯಕ್ಷ ಧರ್ಮೇಂದ್ರ ಸಿಂಗ್ ಚೌಹಾಣ್ ಮತ್ತು ಗ್ವಾಲಿಯರ್ನ ಹಿರಿಯ ನಾಯಕ ಗುಲಾಬ್ ಸಿಂಗ್ ಸೇರಿದ್ದಾರೆ. ಗಾಯಗೊಂಡವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಬಿಜೆಪಿ ಸರಕಾರದ ವೈಫಲ್ಯಗಳು ಮತ್ತು ರೈತ ವಿರೋಧಿ ನೀತಿಗಳನ್ನು ವಿರೋಧಿಸಿ ಮಧ್ಯಪ್ರದೇಶ ವಿಧಾನಸಭೆಗೆ ಕಾಲ್ನಡಿಗೆ ಮೂಲಕ ತೆರಳುವ ಮುನ್ನ ರಂಗಮಹಲ್ ಚೌಕಿ ಸಮೀಪ ನಡೆದ ಪ್ರತಿಭಟನಾ ಸಮಾವೇಶದಲ್ಲಿ ನಾಯಕರು ಭಾಷಣ ಮಾಡುತ್ತಿದ್ದಾಗ ವೇದಿಕೆ ಕುಸಿದಿದೆ ಎಂದು ಶಾಸಕ ಜೈವರ್ಧನ್ ಸಿಂಗ್ ತಿಳಿಸಿದ್ದಾರೆ.
ಕಾಂಗ್ರೆಸ್ ವಕ್ತಾರ ಮತ್ತು ಪಕ್ಷದ ಮಾಧ್ಯಮ ವಿಭಾಗದ ಸಹ ಸಂಯೋಜಕ ಅಭಿನವ್ ಬರೋಲಿಯಾ ಈ ಕುರಿತು ಪ್ರತಿಕ್ರಿಯಿಸಿ, ವೇದಿಕೆ ಕುಸಿದು ಗಾಯಗೊಂಡವರಲ್ಲಿ ಐವರು ಮಹಿಳೆಯರು ಸೇರಿದ್ದು, ಮೂರರಿಂದ ನಾಲ್ಕು ಮಂದಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿಸಿದರು.