ಆದಿವಾಸಿಗಳ ಹಕ್ಕುಗಳನ್ನು ದುರ್ಬಲಗೊಳಿಸಲು ‘ಭ್ರಷ್ಟ ಜನತಾ ಪಾರ್ಟಿ’ ಬಯಸಿದೆ : ಕಾಂಗ್ರೆಸ್ ಆರೋಪ
ಜೈರಾಮ್ ರಮೇಶ್ | Photo Credit: Sushil Kumar Verma
ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರದ ಅರಣ್ಯ ಸಂರಕ್ಷಣೆ ತಿದ್ದುಪಡಿ ಕಾಯ್ದೆಯು 2006ರ ಐತಿಹಾಸಿಕ ಅರಣ್ಯ ಹಕ್ಕುಗಳ ಕಾಯ್ದೆಯ ಪ್ರಗತಿಯನ್ನು ಕೆಡಿಸಿದೆ ಎಂದು ಪ್ರತಿಪಾದಿಸಿರುವ ಕಾಂಗ್ರೆಸ್ ಪಕ್ಷವು, ಬಿಜೆಪಿಯು ಆದಿವಾಸಿಗಳ ಹಕ್ಕುಗಳನ್ನು ದುರ್ಬಲಗೊಳಿಸುತ್ತಿದೆ ಎಂದು ಆರೋಪಿಸಿದೆ.
ರವಿವಾರ ಜಾರ್ಖಂಡ್ ನ ಜಮಶೇದ್ಪುರದಲ್ಲಿ ಪ್ರಧಾನಿಯವರ ರ್ಯಾಲಿಗೆ ಮುನ್ನ ತನ್ನ ಎಕ್ಸ್ ಪೋಸ್ಟ್ನಲ್ಲಿ ಅವರ ಮುಂದೆ ಪ್ರಶ್ನೆಗಳನ್ನಿರಿಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು, ಜಮಶೇದ್ಪುರದ ಜನರು ಈಗಲೂ ಕಳಪೆ ಸಾರಿಗೆ ಸಂಪರ್ಕದಿಂದ ಏಕೆ ಬವಣೆ ಪಡುತ್ತಿದ್ದಾರೆ? ಜಾರ್ಖಂಡ್ ನ ಆದಿವಾಸಿ ಮುಖ್ಯಮಂತ್ರಿಯನ್ನು ಏಕೆ ಜೈಲಿಗಟ್ಟಲಾಗಿದೆ? ಆದಿತ್ಯಪುರ ಕೈಗಾರಿಕಾ ಪ್ರದೇಶವು ಈಗಲೂ ಏಕೆ ಪರಿಸರ ಅನುಮತಿಗಾಗಿ ಕಾಯುತ್ತಿದೆ? ಪ್ರಧಾನಿ ಆದಿವಾಸಿಗಳ ಧಾರ್ಮಿಕ ಅನನ್ಯತೆಯನ್ನು ಮತ್ತು ಅವರ ಸರ್ನಾ ಧರ್ಮಕ್ಕೆ ಮಾನ್ಯತೆಯನ್ನು ನಿರಾಕರಿಸಿದ್ದು ಏಕೆ ಎಂದು ಕೇಳಿದ್ದಾರೆ.
ಜಾರ್ಖಂಡ್ ರಾಜ್ಯಕ್ಕೆ ಅಗತ್ಯ ಮೂಲ ಸೌಕರ್ಯಗಳನ್ನು ನಿರಾಕರಿಸಿದ್ದೇಕೆ ಮತ್ತು ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ಗೆ ಏನಾಯಿತು ಎಂದೂ ರಮೇಶ್ ಪ್ರಶ್ನಿಸಿದ್ದಾರೆ.
ನಿರ್ಗಮಿಸುತ್ತಿರುವ ಪ್ರಧಾನಿಯವರ ಇಬ್ಬರು ಆತ್ಮೀಯ ಸ್ನೇಹಿತರ (ಅಂಬಾನಿ ಮತ್ತು ಅದಾನಿ) ಕಪ್ಪುಹಣ ತುಂಬಿದ ಟೆಂಪೋಗಳು (ಅವರು ನಮ್ಮ ಕುರಿತು ಹೇಳಿದ್ದ) ನಿರಾತಂಕವಾಗಿ ತಿರುಗಾಡುತ್ತಿದ್ದರೂ ಅವರೇಕೆ ಜಾರಿ ನಿರ್ದೇಶನಾಲಯ (ಈಡಿ) ಮತ್ತು ಸಿಬಿಐನಿಂದ ಸುರಕ್ಷಿತರಾಗಿದ್ದಾರೆ? ಆದರೆ ಯಾವುದೇ ನಾಚಿಕೆಯಿಲ್ಲದೆ ಜಾರ್ಖಂಡ್ ನ ಆದಿವಾಸಿ ಮುಖ್ಯಮಂತ್ರಿಯನ್ನು ಜೈಲಿಗೆ ತಳ್ಳಲಾಗಿದೆ. ಆದಿವಾಸಿಗಳ ಅನನ್ಯತೆಯನ್ನು ಮತ್ತು ಅವರ ಹಕ್ಕುಗಳನ್ನು ದುರ್ಬಲಗೊಳಿಸಲು ‘ಭ್ರಷ್ಟ ಜನತಾ ಪಾರ್ಟಿ’ಯು ಪ್ರಯತ್ನಿಸುತ್ತಿರುವಾಗ ಇದು ಆಶ್ಚರ್ಯವನ್ನುಂಟು ಮಾಡುವುದಿಲ್ಲ ಎಂದು ರಮೇಶ್ ಕುಟುಕಿದ್ದಾರೆ.