ಮರಾಠಾ ಮೀಸಲಾತಿ ವಿರುದ್ಧ ನ.17ರಂದು ಓಬಿಸಿ ರ್ಯಾಲಿ ನಡೆಸಲು ಭುಜಬಲ್ ಕರೆ
ಛಗನ್ ಭುಜಬಲ್ Photo- PTI
ಮುಂಬೈ: ಸಮಗ್ರ ಮರಾಠಾ ಸಮುದಾಯಕ್ಕೆ ಮೀಸಲಾತಿ ನೀಡುವುದನ್ನು ಹಾಗೂ ಆ ಸಮುದಾಯಗಳನ್ನು ಕುಣುಬಿ ಸಮುದಾಯದ ಶ್ರೇಣಿಯೊಂದಿಗೆ ಸೇರ್ಪಡೆಗೊಳಿಸುವುದಕ್ಕೆ ಮಹಾರಾಷ್ಟ್ರದ ಎನ್ಸಿಪಿಯ ಹಿರಿಯ ಸಚಿವ ಛಗನ್ ಭುಜಬಲ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ನ.17ರಂದು ಮರಾಠಾ ಮೀಸಲಾತಿ ವಿರುದ್ಧ ಬೃಹತ್ ರ್ಯಾಲಿ ನಡೆಸುವಂತೆಯೂ ಅವರು ಓಬಿಸಿ ಸಮುದಾಯಗಳಿಗೆ ಕರೆ ನೀಡಿದ್ದಾರೆ.
ಮರಾಠಾ ಸಮುದಾಯದ ಮೀಸಲಾತಿಯ ಬಗ್ಗೆ ಚರ್ಚಿಸಲು ಭುಜಬಲ್ ಅವರು ಮಂಗಳವಾರ ಜಲ್ನಾದಲ್ಲಿರುವ ತನ್ನ ನಿವಾಸದಲ್ಲಿ ಓಬಿಸಿ ನಾಯಕರುಗಳ ಸಭೆ ಕರೆದಿದ್ದರು.
ಸಭೆಯಲ್ಲಿ ಭುಜಬಲ್ ಅವರು ಮರಾಠಾ ಮೀಸಲಾತಿಯು ಚಳವಳಿಯು ಓಬಿಸಿ ಸಮುದಾಯಕ್ಕೆ ದೊಡ್ಡ ಸವಾಲಾಗಿದ್ದು, ಅದನ್ನು ಸಮರ್ಥವಾಗಿ ಬಗೆಹರಿಸಬೇಕಾಗಿದೆ ಎಂದು ಹೇಳಿದ್ದಾರೆಂದು ಸೋರಿಕೆಯಾದ ದೂರವಾಣಿ ಸಂಭಾಷಣೆಗಳಿಂದ ತಿಳಿದುಬಂದಿದೆ.
ಓಬಿಸಿ ಸಮುದಾಯಗಳು ತಮ್ಮ ಮೀಸಲಾತಿ ಹಕ್ಕುಗಳ ಬಗ್ಗೆ ಬಲವಾದ ಧ್ವನಿಯೆತ್ತಬೇಕು. ಈ ನಿಟ್ಟಿನಲ್ಲಿ ತಾನು ಮುಂಚೂಣಿಯ ಪಾತ್ರ ವಹಿಸಲು ಸಿದ್ಧನಿದ್ದೇನೆ. ‘ ಮಾಡು ಇಲ್ಲವೇ ಮಡಿ’ ಎಂಬಂತಹ ಚಳವಳಿಯನ್ನು ನಡೆಸುವ ಸಮಯ ಈಗ ಬಂದಿದೆ ಎಂದವರು ಸಭೆಯಲ್ಲಿ ಹೇಳಿದ್ದಾರೆನ್ನಲಾಗಿದೆ.
ನವೆಂಬರ್ 17ರಂದು ಅಂಬಾಡ್ನಲ್ಲಿ ಬೃಹತ್ ಓಬಿಸಿ ರ್ಯಾಲಿಯನ್ನು ಆಯೋಜಿಸುವಂತೆಯೂ ಈ ಸಂದರ್ಭದಲ್ಲಿ ಅವರು ಕರೆ ನೀಡಿದರು. ಅಂಬಾಡ್ ನಗರವು ಮರಾಠಾ ಮೀಸಲಾತಿಗೆ ಆಗ್ರಹಿಸಿ ಸಾಮಾಜಿಕ ಹೋರಾಟಗಾರ ಮನೋಜ್ ಜಾರಂಗೆ ಪಾಟೀಲ್ ಅವರು ನಿರಶನ ನಡೆಸುತ್ತಿರುವ ಅಂತರರವಾಲಿ ಸಾರತಿ ಗ್ರಾಮಕ್ಕೆ ಕೆಲವೇ ಮೈಲುಗಳ ದೂರದಲ್ಲಿದೆ.
ಶಾಸಕರಾದ ಪ್ರಕಾಶ್ ಸೋಲಂಕೆ ಹಾಗೂ ಸಂದೀಪ್ ಕ್ಷೀರಸಾಗರ ಅವರ ನಿವಾಸಗಳ ಮೇಲೆ ನಡೆಸಲಾದ ದಾಳಿಗಳು ಪೂರ್ವಯೋಜಿತವೆಂದು ಭುಜಬಲ್ ಸಭೆಯಲ್ಲಿ ತಿಳಿಸಿದರು. ಸೋಲಂಕಿ ಅವರು ಅಜಿತ್ ಪವಾರ್ ಅವರಿಗೆ ನಿಷ್ಠರಾಗಿದ್ದರೆ, ಕ್ಷೀರ ಸಾಗರ ಅವರು ಶರದ್ಪವಾರ್ ಅವರ ಬೆಂಬಲಿಗರಾಗಿದ್ದಾರೆ.
ಮರಾಠಾ ಸಮುದಾಯಗಳಿಗೆ ಮೀಸಲಾತಿಗಾಗಿ ನಡೆಯುತ್ತಿರುವ ಚಳವಳಿ ಬಗ್ಗೆ ಬಿಜೆಪಿಯು ತೀವ್ರ ಆತಂಕಗೊಂಡಿದೆ. ಮರಾಠಾ ಮೀಸಲಾತಿ ನೀಡಿಕೆಯು ಓಬಿಸಿಗಳ ಮೇಲೆ ಪರಿಣಾಮ ಬೀರಬಾರದೆಂಬ ಅಭಿಪ್ರಾಯವನ್ನು ಹೊಂದಿದೆ. ಮಹಾರಾಷ್ಟ್ರದಲ್ಲಿ ಓಬಿಸಿ ಸಮುದಾಯಗಳು ಸಾಮಾನ್ಯವಾಗಿ ಬಿಜೆಪಿ ಬೆಂಬಲಿಗರಾಗಿದ್ದಾರೆ, ಬಹುತೇಕ ಮರಾಠಾ ಸಮುದಾಯಗಳವರು ಕಾಂಗ್ರೆಸ್ ಹಾಗೂ ಎನ್ಸಿಪಿಯ ಮತದಾರರಾಗಿದ್ದಾರೆ.