ಪ್ರಧಾನಿ ಮೋದಿಯವರಿಗೆ ಭೂತಾನಿನ ಅತ್ಯುನ್ನತ ನಾಗರಿಕ ಪ್ರಶಸ್ತಿ ಪ್ರದಾನ
ನರೇಂದ್ರ ಮೋದಿ | Photo: PTI
ಥಿಂಪು : ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರ ಭೂತಾನಿನ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಆರ್ಡರ್ ಆಫ್ ದಿ ಡ್ರಕ್ ಗ್ಯಾಲ್ಪೊ’ಗೆ ಭಾಜನರಾಗಿದ್ದಾರೆ. ಮೋದಿ ಭೂತಾನಿನಿಂದ ಈ ಪ್ರಶಸ್ತಿಯನ್ನು ಸ್ವೀಕರಿಸಿದ ಮೊದಲ ವಿದೇಶಿ ಸರಕಾರದ ನಾಯಕರಾಗಿದ್ದಾರೆ. ಭೂತಾನ್ ದೊರೆ ಜಿಗ್ಮೆ ಖೇಸರ್ ನಾಮ್ಗ್ಯೆಲ್ ವಾಂಗ್ಚುಕ್ ಅವರು ಇಲ್ಲಿಯ ತಷಿಚೋ ಝಾಂಗ್ ಅರಮನೆಯಲ್ಲಿ ಮೋದಿಯವರಿಗೆ ಪ್ರಶಸ್ತಿಯನ್ನು ಪ್ರದಾನಿಸಿದರು.
ಭಾರತ-ಭೂತಾನ್ ಸಂಬಂಧಗಳನ್ನು ಬಲಪಡಿಸುವಲ್ಲಿ ಮೋದಿಯವರ ಅಸಾಧಾರಣ ಕೊಡುಗೆ ಹಾಗೂ ಭೂತಾನ್ ಮತ್ತು ಅದರ ಪ್ರಜೆಗಳಿಗೆ ಅವರ ವಿಶಿಷ್ಟ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ಪ್ರದಾನಿಸಲಾಗಿದೆ ಎಂದು ಹೇಳಿಕೆಯು ತಿಳಿಸಿದೆ.
2021,ಡಿ.17ರಂದು 114ನೇ ರಾಷ್ಟ್ರೀಯ ದಿನಾಚರಣೆ ಸಂದರ್ಭದಲ್ಲಿ ಭೂತಾನ್ ದೊರೆ ಮೋದಿಯವರಿಗೆ ಈ ಪ್ರಶಸ್ತಿಯನ್ನು ಪ್ರಕಟಿಸಿದ್ದರು.
ಜೀವಮಾನ ಸಾಧನೆಗಾಗಿ ನೀಡಲಾಗುವ ಆರ್ಡರ್ ಆಫ್ ದಿ ಡ್ರಕ್ ಗ್ಯಾಲ್ಪೊ ಭೂತಾನಿನ ಅತ್ಯುನ್ನತ ಗೌರವವಾಗಿದೆ.
ಎರಡು ದಿನಗಳ ಭೂತಾನ್ ಭೇಟಿಯಲ್ಲಿರುವ ಮೋದಿ ದೊರೆ ವಾಂಗ್ಚುಕ್ ಅವರನ್ನು ಅರಮನೆಯಲ್ಲಿ ಭೇಟಿಯಾಗಿ ಮಾತುಕತೆಗಳನ್ನು ನಡೆಸಿದರು. ದೊರೆಯ ಉಪಸ್ಥಿತಿಯಲ್ಲಿ ಟೆಂಡ್ರೆಲ್ಥಾಂಗ್ ಉತ್ಸವ ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿಯೂ ಅವರು ಪಾಲ್ಗೊಂಡಿದ್ದರು.
ಮೋದಿಯವರ ಸ್ವಾಗತಕ್ಕಾಗಿ ಪಾರೋದಿಂದ ಥಿಂಪುವರೆಗಿನ 45 ಕಿ.ಮೀ.ಮಾರ್ಗದುದ್ದಕ್ಕೂ ಜನರು ಭಾರೀ ಸಂಖ್ಯೆಯಲ್ಲಿ ಸಮಾವೇಶಗೊಂಡಿದ್ದರು. ಥಿಂಪು ಅರಮನೆಯಲ್ಲಿ ಅವರ ಆಗಮನಕ್ಕಾಗಿ ನೂರಾರು ಸ್ಥಳೀಯರು ಕಾದು ನಿಂತಿದ್ದರು.
ತನ್ನ ಭೂತಾನ್ ಭೇಟಿ ಸಂದರ್ಭದಲ್ಲಿ ಮೋದಿ ಉಭಯ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಸಹಭಾಗಿತ್ವವನ್ನು ಹೆಚ್ಚಿಸಲು ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ.
ಥಿಂಪುವಿನಲ್ಲಿ ಮೋದಿ ಉಳಿದುಕೊಂಡಿದ್ದ ಹೋಟಲ್ ನಲ್ಲಿ ಅವರಿಗೆ ವಿಶೇಷ ಸ್ವಾಗತ ಲಭಿಸಿತ್ತು. ಗುಜರಾತಿನ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿದ್ದ ಭೂತಾನಿನ ಯುವಜನರು ಮೋದಿಯವರು ರಚಿಸಿದ್ದ ಗರ್ಬಾ ಹಾಡಿಗೆ ನೃತ್ಯವನ್ನು ಪ್ರದರ್ಶಿಸಿದರು.