ಗುಜರಾತಿನಲ್ಲಿ ಬಡವಿದ್ಯಾರ್ಥಿಗಳಿಗೆ ಸಿಗಬೇಕಿದ್ದ ಒಂದು ಲಕ್ಷ ಸೈಕಲ್ಗಳು ಇನ್ನೂ ವಿತರಣೆಯಾಗಿಲ್ಲ; ವರದಿ

ಸಾಂದರ್ಭಿಕ ಚಿತ್ರ | PC : PTI
ಅಹ್ಮದಾಬಾದ್: ಡಿಸೆಂಬರ್,2024ಕ್ಕೆ ಇದ್ದಂತೆ ಸರಸ್ವತಿ ಸಾಧನಾ ಯೋಜನೆಯಡಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳು(ಎಸ್ಇಬಿಸಿ) ಮತ್ತು ಪರಿಶಿಷ್ಟ ಜಾತಿ (ಎಸ್ಸಿ) ವಿದ್ಯಾರ್ಥಿಗಳಿಗೆ ನೀಡಬೇಕಿದ್ದ 1,18,071 ಸೈಕಲ್ಗಳನ್ನು ಈವರೆಗೆ ವಿತರಿಸಲಾಗಿಲ್ಲ ಎಂದು ಗುಜರಾತ್ ಸರಕಾರವು ಗುರುವಾರ ರಾಜ್ಯ ವಿಧಾನಸಭೆಯಲ್ಲಿ ತಿಳಿಸಿದೆ.
ಒಂಭತ್ತನೇ ತರಗತಿಯ ಬಾಲಕಿಯರು ಶಾಲೆಗೆ ತೆರಳಲು ಅನುಕೂಲವಾಗುವಂತೆ ಅವರಿಗೆ ಸೈಕಲ್ಗಳನ್ನು ಒದಗಿಸುವ ಉದ್ದೇಶದಿಂದ ಬಿಜೆಪಿ ಸರಕಾರವು ಆರಂಭಿಸಿದ್ದ ಯೋಜನೆಯು ಶಾಲೆಗಳಲ್ಲಿ ದುರ್ಬಲ ವರ್ಗಗಳಿಗೆ ಸೇರಿದ ಮಕ್ಕಳ ಹಾಜರಾತಿಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.
ಸದನದಲ್ಲಿ ಕಾಂಗ್ರೆಸ್ ಶಾಸಕ ಅಮಿತ್ ಚಾವ್ಡಾ ಅವರಿಗೆ ನೀಡಿದ ಉತ್ತರದಲ್ಲಿ ರಾಜ್ಯ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು,2023ರಲ್ಲಿ ಸರಕಾರವು ಎಸ್ಸಿ ವಿದ್ಯಾರ್ಥಿಗಳಿಗೆ 13,300 ಮತ್ತು ಎಸ್ಇಬಿಸಿ ವಿದ್ಯಾರ್ಥಿಗಳಿಗೆ 98,212 ಸೈಕಲ್ಗಳಿಗಾಗಿ ಬೇಡಿಕೆಯನ್ನಿಟ್ಟಿತ್ತು,ಆದರೆ ಗುಜರಾತ್ ಗ್ರಾಮೀಣ ಕೈಗಾರಿಕೆಗಳ ಮಾರುಕಟ್ಟೆ ನಿಗಮ (ಜಿಆರ್ಐಎಂಸಿ)ವು ಎಸ್ಸಿಗಳಿಗೆ 6,829 ಮತ್ತು ಎಸ್ಇಬಿಸಿಗಳಿಗೆ 77,607 ಸೈಕಲ್ಗಳನ್ನು ಪೂರೈಸಿದ್ದು,ಅನುಕ್ರಮವಾಗಿ 6,871 ಮತ್ತು 20,605 ಸೈಕಲ್ಗಳ ಕೊರತೆಯಾಗಿತ್ತು ಎಂದು ಬಹಿರಂಗಗೊಳಿಸಿದೆ.
ಬಳಿಕ 2024ರಲ್ಲಿ ಎಸ್ಸಿ ವಿದ್ಯಾರ್ಥಿಗಳಿಗಾಗಿ 12,800 ಮತ್ತು ಎಸ್ಇಬಿಸಿ ವಿದ್ಯಾರ್ಥಿಗಳಿಗಾಗಿ 1,05,271 ಸೈಕಲ್ಗಳನ್ನು ಪೂರೈಸುವಂತೆ ಸರಕಾರವು ಜಿಆರ್ಐಎಂಸಿಯನ್ನು ಕೋರಿತ್ತು,ಆದರೆ ಒಂದೇ ಒಂದು ಸೈಕಲ್ನ್ನೂ ಪೂರೈಸಲಾಗಿಲ್ಲ.
2023ರಿಂದ ಬಾಕಿಯಿದ್ದ ಬಹುತೇಕ್ ಸೈಕಲ್ಗಳನ್ನು ವಿತರಿಸಲಾಗಿದೆ ಎಂದು ಸರಕಾರವು ಸದನದಲ್ಲಿ ತಿಳಿಸಿದೆಯಾದರೂ,2024-25ನೇ ಶೈಕ್ಷಣಿಕ ಸಾಲಿಗೆ 1,05,271 ಸೈಕಲ್ಗಳು ವಿತರಣೆಗೆ ಬಾಕಿಯುಳಿದಿವೆ ಎನ್ನುವುದನ್ನು ಒಪ್ಪಿಕೊಂಡಿದೆ. ಮಾರಾಟಗಾರರಿಂದ ಪೂರೈಕೆಗಳು ಆರಂಭಗೊಂಡ ಬಳಿಕ ಸೈಕಲ್ಗಳ ವಿತರಣೆ ಆರಂಭವಾಗಲಿದೆ ಎಂದು ಅದು ತಿಳಿಸಿದೆ.
ರಾಜಸ್ಥಾನಕ್ಕೆ ಪ್ರತಿ ಸೈಕಲ್ಗೆ 3,857 ರೂ.ದರದಲ್ಲಿ ಪೂರೈಸುತ್ತಿರುವ ಕಂಪನಿಯು ಅದೇ ಸೈಕಲ್ನ್ನು ಗುಜರಾತಿಗೆ 4,444 ರೂ.ಗೆ ಮಾರಾಟ ಮಾಡುತ್ತಿದೆ,ಪ್ರತಿ ಸೈಕಲ್ಗೆ ತೆರಿಗೆದಾರರ 500 ರೂ.ಹೆಚ್ಚುವರಿಯಾಗಿ ವ್ಯಯಿಸಲಾಗುತ್ತಿದೆ. ಅಂದರೆ 1.70 ಲಕ್ಷ ಸೈಕಲ್ಗಳಿಗೆ ಒಟ್ಟು 8.5 ಕೋಟಿ ರೂ.ಗಳ ಹೆಚ್ಚುವರಿ ಹಣವನ್ನು ಪಾವತಿಸಲಾಗುತ್ತಿದೆ ಎಂದು ಚಾವ್ಡಾ ಆರೋಪಿಸಿದರು.