ಬಿಹಾರ | ಸೇತುವೆಯ ಭಾಗ ಕುಸಿತ ; ನಿತೀಶ್ ಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡ ಪ್ರತಿಪಕ್ಷ
ನಿತೀಶ್ ಕುಮಾರ್ | PC : PTI
ಪಾಟ್ನಾ : ಬಿಹಾರದ ಭಾಗಲ್ಪುರ ಜಿಲ್ಲೆಯಲ್ಲಿ ಶುಕ್ರವಾರ ನೆರೆ ನೀರಿನಿಂದ ಸೇತುವೆಯ ಭಾಗವೊಂದು ಕುಸಿದಿದೆ. ಈ ಘಟನೆಯಲ್ಲಿ ಯಾರೊಬ್ಬರಿಗೂ ಗಾಯಗಳಾಗಿಲ್ಲ. ಆದರೆ, ಈ ಘಟನೆ ಪ್ರತಿಪಕ್ಷದ ತೀವ್ರ ಟೀಕೆಗೆ ಕಾರಣವಾಗಿದೆ.
ಬಾಗಲ್ಪುರ ಜಿಲ್ಲಾಧಿಕಾರಿ (ಡಿಎಂ) ಕಚೇರಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ರಾಜ್ಯದಲ್ಲಿ ಭಾರೀ ಮಳೆ ಸುರಿದಿರುವುದರಿಂದ ನೀರಿನ ಮಟ್ಟ ಏರಿಕೆಯಾಗಿ ಸೇತುವೆಯ ಒಂದು ಕಂಬ ಕುಸಿದಿದೆ ಎಂದು ತಿಳಿಸಲಾಗಿದೆ.
ಈ ಸೇತುವೆ ಭಕ್ತಿಯಾರ್ಪುರ ರಸ್ತೆಯ ಮೂಲಕ ಪಿರಪೈಂತಿ ಡೊಮಿನಿಯಾ ಚೌಕ್ ಹಾಗೂ ಬಾಬುಪುರವನ್ನು ಸಂಪರ್ಕಿಸುತ್ತದೆ. ಸೇತುವೆಯ ಕಂಬ ಕುಸಿದ ಬಳಿಕ ರಸ್ತೆ ಸಂಚಾರಕ್ಕೆ ವ್ಯಾಪಕ ಅಡ್ಡಿ ಉಂಟಾಗಿದೆ. ನೆರೆ ನೀರಿನ ಮಟ್ಟದಲ್ಲಿ ಏರಿಕೆಯಾಗುತ್ತಿರುವುದರಿಂದ ದ್ವಿಚಕ್ರ ವಾಹನ ಸವಾರರು ಹಾಗೂ ಪಾದಯಾತ್ರಿಗಳು ಯಾವುದೇ ಸೇತುವೆಯನ್ನು ದಾಟದಂತೆ ಜಿಲ್ಲಾಡಳಿತ ನಿಷೇಧಿಸಿದೆ.
ಸಾರ್ವಜನಿಕ ಸುರಕ್ಷೆಗಾಗಿ ಕುಸಿದ ರಸ್ತೆಯ ಎರಡೂ ಬದಿ ಬ್ಯಾರಿಕೇಡ್ಗಳನ್ನು ಅಳವಡಿಸಲು ಬಾಗಲ್ಪುರ ಜಿಲ್ಲಾಧಿಕಾರಿ ನವಲ್ ಕಿಶೋರ್ ಚೌಧರಿ ಆದೇಶಿಸಿದ್ದಾರೆ.
ಈ ಸೇತುವೆಯನ್ನು 2004ರಲ್ಲಿ ನಿರ್ಮಾಣ ಮಾಡಲಾಗಿತ್ತು. ಕಳೆದ ಕೆಲವು ತಿಂಗಳಲ್ಲಿ ಸುಮಾರು 20 ಸಣ್ಣ ಹಾಗೂ ದೊಡ್ಡ ಸೇತುವೆಗಳು ಕುಸಿದಿವೆ. ಸಿವಾನ್, ಸರಣ್, ಮಧುಬನಿ, ಅರಾರಿಯಾ, ಪೂರ್ವ ಚಂಪಾರಣ್ ಹಾಗೂ ಕಿಷನ್ಗಂಜ್ ಜಿಲ್ಲೆಗಳಲ್ಲಿ ಸೇತುವೆ ಕುಸಿದ ಘಟನೆಗಳು ಸಂಭವಿಸಿವೆ.
ಈ ನಡುವೆ ಇತ್ತೀಚೆಗೆ ಸೇತುವೆ ಕುಸಿದ ಘಟನೆ ಹಿನ್ನೆಲೆಯಲ್ಲಿ ಆರ್ಜೆಡಿ ನಾಯಕ ತೇಜಸ್ವಿ ಪ್ರಸಾದ್ ಯಾದವ್ ನಿತೀಶ್ ಕುಮಾರ್ ನೇತೃತ್ವದ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ‘‘ಬಿಹಾರದ ಬಾಗಲ್ಪುರದಲ್ಲಿ ಇನ್ನೊಂದು ಸೇತುವೆ ಕುಸಿದಿದೆ. ನಿತೀಶ್ ಕುಮಾರ್ ಅವರ ಆಡಳಿತದಲ್ಲಿ ಸೇತುವೆಗಳ ಕಂಬಗಳಿಗಿಂತ ಭ್ರಷ್ಟಾಚಾರ ಆಳಕ್ಕೆ ಇಳಿದಿದೆ’’ ಎಂದು ಹೇಳಿದ್ದಾರೆ.
ಕಳೆದ ಎರಡು ಮೂರು ತಿಂಗಳಲ್ಲಿ ಸಾವಿರಾರ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾದ ಹಾಗೂ ನಿರ್ಮಾಣ ಹಂತದಲ್ಲಿರುವ ನೂರಾರು ಸೇತುವೆಗಳು, ಸಣ್ಣ ಸೇತುವೆಗಳು ಹಾಗೂ ಬೃಹತ್ ಸೇತುವೆಗಳು ಕುಸಿದಿವೆ ಎಂದು ಅವರು ‘ಎಕ್ಸ್’ನಲ್ಲಿ ಬರೆದಿದ್ದಾರೆ.