ಬಿಹಾರ | ಕಳ್ಳಭಟ್ಟಿ ದುರಂತಕ್ಕೆ 7 ಬಲಿ
ಸಾಂದರ್ಭಿಕ ಚಿತ್ರ
ಪಾಟ್ನಾ : ಬಿಹಾರದಲ್ಲಿ ಸಂಭವಿಸಿದ ಕಳ್ಳಭಟ್ಟಿ ದುರಂತದಲ್ಲಿ ಏಳು ಮಂದಿ ಮೃತಪಟ್ಟು, ಇನ್ನಿಬ್ಬರು ತೀವ್ರವಾಗಿ ಅಸ್ವಸ್ಚಗೊಂಡ ಘಟನೆ ಮಂಗಳವಾರ ವರದಿಯಾಗಿದೆ. ಸಿವಾನ್ ಜಿಲ್ಲೆಯಲ್ಲಿ ಈ ದುರಂತ ಸಂಭವಿಸಿದೆ. ನೆರೆಯ ಜಿಲ್ಲೆಯಾದ ಸಾರನ್ನಲ್ಲಿ ಸೋಮವಾರ ಕಳ್ಳಭಟ್ಟಿ ಮದ್ಯ ಸೇವಿಸಿ ಓರ್ವ ಮೃತಪಟ್ಟಿದ್ದು, ಇನ್ನೋರ್ವ ಅಸ್ವಸ್ಥಗೊಂಡಿದ್ದನು.
ಸಿವಾನ್ ಜಿಲ್ಲೆಯ ಮಾಧಾರ್ ಗ್ರಾಮದಲ್ಲಿ ಕಳ್ಳಭಟ್ಟಿ ಮದ್ಯ ಸೇವಿಸಿ ಏಳು ಮಂದಿ ಸಾವನ್ನಪಿದ್ದಾರೆ. ತೀವ್ರವಾಗಿ ಅಸ್ವಸ್ಥಗೊಂಡ ಇನ್ನಿಬ್ಬರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಂಗಳವಾರ ರಾತ್ರಿ ಅಂಗಡಿಯೊಂದರಲ್ಲಿ ಮಾರಾಟವಾಗುತ್ತಿದ್ದ ಅಕ್ರಮ ಮದ್ಯವನ್ನು ಸೇವಿಸಿದ ಮನೆಗೆ ತಲುಪಿದ ಹಲವರಿಗೆ ದೃಷ್ಟಿನಾಶ, ವಾಕರಿಕೆ ಹಾಗೂ ಹೊಟ್ಟೆನೋವು ಕಾಣಿಸಿಕೊಂಡಿತ್ತು. ಇವರ ಪೈಕಿ ಆರು ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗಲೇ ಅಸುನೀಗ್ದಿಾರೆ. ಇನ್ನೋರ್ವ ವ್ಯಕ್ತಿ ಪಾಟ್ನಾ ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಕೊಂಡೊಯ್ಯುತ್ತಿರುವಾಗಲೇ ಕೊನೆಯುಸಿರೆಳೆದಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.
ಮೃತರನ್ನು ಅರವಿಂದ್ ಸಿಂಗ್ (40), ರಮೇಂದ್ರ ಸಿಂಗ್ (30), ಸಂತೋಷ್ ಮಹತೋ (35), ಮುನ್ನಾ (32) ಹಾಗೂ ಬ್ರಿಜ್ ಮೋಹನ್ ಸಿಂಗ್ (38) ಹಾಗೂ ಮೋಹನ್ ಶಾ (28) ಎಂದು ಗುರುತಿಸಲಾಗಿದೆ. ಇನ್ನಿಬ್ಬರು ಮೃತಪಟ್ಟವರ ಗುರುತು ಪತ್ತೆಯಾಗಿಲ್ಲವಾದರೂ, ಅವರು ಆಸುಪಾಸಿನ ಬಿಲಾಸಪುರ ಹಾಗೂ ಸರ್ಸಿಯಾ ಗ್ರಾಮದ ನಿವಾಸಿಗಳೆನ್ನಲಾಗಿದೆ. ಇವರೆಲ್ಲರೂ ಮಾಧಾರ್ ಗ್ರಾಮದ ಅಂಗಡಿಯಲ್ಲಿ ಕಳ್ಳಭಟ್ಟಿ ಮದ್ಯ ಸೇವಿಸಿದ್ದ ಜನರ ಗುಂಪಿನಲ್ಲಿದ್ದರೆಂದು ಪೊಲೀಸರು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿ ತನಿಖೆ ನಡೆಸಲು ತಂಡವೊಂದನ್ನು ಮಾಧಾರ್ ಗ್ರಾಮಕ್ಕೆ ರವಾನಿಸಲಾಗಿದೆಯೆಂದು ಸಿವಾನ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಮುಕುಲ್ ಕುಮಾರ್ ಗುಪ್ತಾ ತಿಳಿಸಿದ್ದಾರೆ.
ಬಿಹಾರದಲ್ಲಿ ಮದ್ಯನಿಷೇಧವು 2016ರಲ್ಲಿ ಜಾರಿಗೆ ಬಂದಿದ್ದು, ಮದ್ಯದ ದಾಸ್ತಾನು, ಸೇವನೆ ಹಾಗೂ ಮಾರಾಟವನ್ನು ಸಂಪೂರ್ಣವಾಗಿ ಪ್ರತಿಬಂಧಿಸಲಾಗಿದೆ.