ಬಿಹಾರ | ಮಾಜಿ ಕೇಂದ್ರ ಸಚಿವ ಆರ್.ಸಿ.ಪಿ.ಸಿಂಗ್ ರಿಂದ ನೂತನ ರಾಜಕೀಯ ಪಕ್ಷ ಸ್ಥಾಪನೆ
ಆರ್.ಸಿ.ಪಿ.ಸಿಂಗ್ | pc : x
ಪಟ್ನಾ : ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ‘ಅವಕೃಪೆ’ಗೆ ಒಳಗಾದ ಬಳಿಕ 2022ರಲ್ಲಿ ಕೇಂದ್ರ ಸಂಪುಟ ತೊರೆದಿದ್ದ, ಆರ್.ಸಿ.ಪಿ.ಸಿಂಗ್ ಅವರು ಗುರುವಾರ ‘ಆಪ್ ಸಬ್ ಕಿ ಆವಾಝ್’ ಎಂಬ ನೂತನ ರಾಜಕೀಯ ಪಕ್ಷವನ್ನು ಸ್ಥಾಪಿಸಿದ್ದಾರೆ.
ದೀಪಾವಳಿ ಹಬ್ಬದ ಜೊತೆಗೆ ಸರ್ದಾರ್ ವಲ್ಲಭ ಬಾಯಿ ಪಟೇಲ್ ಅವರ ಜನ್ಮದಿನಾಚರಣೆ ಒಂದೇ ದಿನ ಬಂದಿರುವ ಕಾರಣ ಗುರುವಾರದಂದು ನೂತನ ರಾಜಕೀಯಪಕ್ಷವನ್ನು ಆರಂಭಿಸಿರುವುದಾಗಿ ಅವರು ಹೇಳಿದ್ದಾರೆ.
ಪಟ್ನಾದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ತನ್ನ ಪಕ್ಷವು ಸ್ಪರ್ಧಿಸಲಿದೆ. ಈಗಾಗಲೇ 243 ಕ್ಷೇತ್ರಗಳ ಪೈಕಿ 140 ಕ್ಷೇತ್ರಗಳಿಗೆ ಸಂಭಾವ್ಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆಯೆಂದು ಅವರು ಹೇಳಿದ್ದಾರೆ.
ಜೆಡಿಯು ವರಿಷ್ಠ ನಿತೀಶ್ ಕುಮಾರ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ಅವರು ರಾಜ್ಯದಲ್ಲಿ ಮದ್ಯಪಾನ ನಿಷೇಧ ಕಾನೂನು ವಿಫಲವಾಗಿದೆಯೆಂದು ಟೀಕಿಸಿದರು. ಸರಕಾರಿ ಶಿಕ್ಷಣ ಸಂಸ್ಥೆಗಳ ಗುಣಮಟ್ಟ ಕುಸಿದಿದೆ ಎಂದರು.
ಮಾಜಿ ಐಎಎಸ್ ಅಧಿಕಾರಿಯಾದ ಆರ್.ಸಿ.ಪಿ.ಸಿಂಗ್ ಅವರು 2010ರಲ್ಲಿ ಸ್ವಯಂ ನಿವೃತ್ತಿಯನ್ನು ಪಡೆದ ಬಳಿಕ ಜೆಡಿಯು ಸೇರಿದ್ದರು, ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದರು. ಸತತ ಎರಡು ಅವಧಿಗೆ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು. ಆದರೆ 2021ರಲ್ಲಿ ನರೇಂದ್ರ ಮೋದಿ ಸಂಪುಟಕ್ಕೆ ಆರ್.ಸಿ.ಪಿ.ಸಿಂಗ್ ಸೇರ್ಪಡೆಗೊಂಡ ಬಳಿಕ ನಿತೀಶ್ ಜೊತೆಗಿನ ಅವರ ಬಾಂಧವ್ಯ ಹಳಸಿತ್ತು. ಇದರ ಪರಿಣಾಮವಾಗಿ ಜೆಡಿಯು ರಾಷ್ಟ್ರಾಧ್ಯಕ್ಷರಾಗಿ ನೇಮಕಗೊಂಡ ಕೆಲವೇ ತಿಂಗಳುಗಳಲ್ಲಿ ಅವರು ಆ ಹುದ್ದೆಯನ್ನು ತೊರೆಯಬೇಕಾಯಿತು. ಅಲ್ಲದೆ ಒಂದು ವರ್ಷದ ಬಳಿಕ ಅವರಿ ಇನ್ನೊಂದು ಅವಧಿಗೆ ರಾಜ್ಯಸಭಾ ಸದಸ್ಯತ್ವವನ್ನು ನೀಡಲು ಜೆಡಿಯು ನಿರಾಕರಿಸಿದ ಹಿನ್ನೆಲೆಯಲ್ಲಿ ಅವರು ಕೇಂದ್ರ ಸಂಪುಟವನ್ನು ತೊರೆಯಬೇಕಾಗಿತ್ತು.