ಬಿಹಾರ ರಾಜ್ಯಪಾಲ ಆರಿಫ್ ನಿವಾಸದ ಔತಣ ಕೂಟಕ್ಕೆ ನಿತೀಶ್ ಕುಮಾರ್ ಗೈರು

Photo credit: ANI
ಪಾಟ್ನಾ: ಗಣರಾಜ್ಯೋತ್ಸವದ ಅಂಗವಾಗಿ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ರಾಜಭವನದಲ್ಲಿ ರವಿವಾರ ಏರ್ಪಡಿಸಿದ್ದ ಔತಣ ಕೂಟಕ್ಕೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಗೈರಾಗಿದ್ದು, ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ನಿತೀಶ್ ಕುಮಾರ್ ಅವರು ರಾಜ್ಯಪಾಲ್ ಆರಿಫ್ ಅವರೊಂದಿಗೆ ಗಣರಾಜ್ಯೊತ್ಸವ ಪಥ ಸಂಚಲನದಲ್ಲಿ ಭಾಗವಹಿಸಿದ್ದರಾದರೂ, ರಾಜಭವನದಲ್ಲಿ ಆಯೋಜಿಸಿದ್ದ ಔತಣ ಕೂಟದಲ್ಲಿ ಪಾಲ್ಗೊಂಡಿರಲಿಲ್ಲ.
ರಾಜ್ಯಪಾಲರ ಔತಣ ಕೂಟದಲ್ಲಿ ಭಾಗವಹಿಸದೆ ಇರಲು ಜೆಡಿಯು ವರಿಷ್ಠರ ಅಸಮರ್ಥತೆಯೇ ಪ್ರಮುಖ ಕಾರಣ ಎಂದು ವಿರೋಧ ಪಕ್ಷಗಳ ನಾಯಕರು ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಸ್ಪಷ್ಟೀಕರಣ ನೀಡಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್ ಆಪ್ತ ಮೂಲಗಳು, “ಗಣರಾಜ್ಯೋತ್ಸವ ಪಥ ಸಂಚಲನದ ಬಳಿಕ ನಿತೀಶ್ ಕುಮಾರ್ ಅವರ ಅರೋಗ್ಯದಲ್ಲಿ ಏರುಪೇರಾಗಿದ್ದು, ಜ್ವರದಿಂದ ಬಳಲುತ್ತಿದ್ದರು. ಹೀಗಾಗಿ ಅವರು ಔತಣ ಕೂಟದಲ್ಲಿ ಪಾಲ್ಗೊಂಡಿರಲಿಲ್ಲ” ಎಂದು ಹೇಳಿವೆ.
ಈ ಎಲ್ಲ ಬೆಳವಣಿಗೆಗಳ ನಡುವೆ, ಇಂದಿನಿಂದ (ಸೋಮವಾರ) ನಿತೀಶ್ ಕುಮಾರ್ ನೇತೃತ್ವದಲ್ಲಿ ಆರಂಭವಾಗಬೇಕಿದ್ದ ‘ಪ್ರಗತಿ ಯಾತ್ರೆ’ಯನ್ನು ಅನಿವಾರ್ಯ ಕಾರಣಗಳಿಂದ ಮುಂದೂಡಲಾಗಿದೆ ಎಂದು ಸಂಪುಟ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ತಮಿಳುನಾಡು ರಾಜ್ಯಪಾಲರ ಔತಣ ಕೂಟ ಬಹಿಷ್ಕರಿಸಿದ ಸ್ಟಾಲಿನ್:
ಗಣರಾಜ್ಯೋತ್ಸವದ ಅಂಗವಾಗಿ ರಾಜ್ಯಪಾಲ ಆರ್.ಎನ್.ರವಿ ಅವರು ರಾಜಭವನದಲ್ಲಿ ಏರ್ಪಡಿಸಿದ್ದ ಔತಣ ಕೂಟದಲ್ಲಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಪಾಲ್ಗೊಂಡಿರಲಿಲ್ಲ.
ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ರಾಜಭವನ ಮತ್ತು ಡಿಎಂಕೆ ನೇತೃತ್ವದ ಸರಕಾರದ ನಡುವಿನ ಜಟಾಪಟಿಯೇ ಈ ನಡೆಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಆದರೆ, ರಾಜಭವನದಲ್ಲಿ ನಡೆದ ಔತಣ ಕೂಟದಲ್ಲಿ ವಿರೋಧ ಪಕ್ಷಗಳಾದ ಎಐಎಡಿಎಂಕೆ, ಬಿಜೆಪಿ, ಡಿಎಂಡಿಕೆ ಹಾಗೂ ಪುದಿಯ ತಮಿಳಗಂ ಪಕ್ಷಗಳ ನಾಯಕರು ಭಾಗವಹಿಸಿದ್ದರು.