ವಾರಣಾಸಿಯಿಂದಲೇ ಲೋಕಸಭಾ ಚುನಾವಣಾ ಪ್ರಚಾರ ಆರಂಭಿಸಲಿರುವ ಬಿಹಾರ ಸಿಎಂ ನಿತೀಶ್ ಕುಮಾರ್
ಪಾಟ್ನಾ: ಮುಂದಿನ ವರ್ಷ ನಡೆಯುವ ಸಾರ್ವತ್ರಿಕ ಚುನಾವಣೆಯ ಪ್ರಚಾರ ಕಾರ್ಯವನ್ನು ಪ್ರಧಾನಿ ನರೇಂದ್ರ ಮೋದಿ ಪ್ರತಿನಿಧಿಸುವ ವಾರಾಣಾಸಿಯಿಂದಲೇ ಆರಂಭಿಸಲು ಇಂಡಿಯಾ ಮೈತ್ರಿಕೂಟದ ಪಕ್ಷವಾದ ಸಂಯುಕ್ತ ಜನತಾದಳ ಮುಖಂಡ ಹಾಗೂ ಬಿಹಾರ ಸಿಎಂ ನಿತೀಶ್ ಕುಮಾರ್ ನಿರ್ಧರಿಸಿದ್ದಾರೆ. ಬಿಹಾರ ಸಿಎಂನ ವಿವರವಾದ ಪ್ರಚಾರ ವೇಳಾಪಟ್ಟಿಯನ್ನು ಪಕ್ಷ ಅಂತಿಮಪಡಿಸಿದ್ದು, ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಜನಬೆಂಬಲವನ್ನು ಗಳಿಸುವ ಉದ್ದೇಶದಿಂದ ವಿವಿಧ ರಾಜ್ಯಗಳಲ್ಲಿ ಪ್ರಚಾರ ಕೈಗೊಳ್ಳುವ ಕಾರ್ಯಕ್ರಮವಿದೆ.
ಡಿಸೆಂಬರ್ 24ರಂದು ನಿತೀಶ್ ವಾರಾಣಾಸಿಯಲ್ಲಿ ಸಾರ್ವಜನಿಕ ಸಭೆ ನಡೆಸಲಿರುವ ಅವರು ಬಳಿಕ ಮಹಾರಾಷ್ಟ್ರ, ಹರ್ಯಾಣ, ರಾಜಸ್ಥಾನ, ಜಾರ್ಖಂಡ್ ಮತ್ತು ಗುಜರಾತ್‍ನಲ್ಲಿ ಪ್ರಚಾರ ಸಭೆ ನಡೆಸುವರು. 2024ರ ಜನವರಿ 21ರಂದು ಜಾರ್ಖಂಡ್‍ನ ರಾಮಗಢದಲ್ಲಿ ನಿತೀಶ್ ಜೊಹಾರ್ ಸಾರ್ವಜನಿಕ ರ್ಯಾಲಿಯಲ್ಲಿ ಪಾಲ್ಗೊಳ್ಳುವರು.
ಸೋಮವಾರ ಅಧಿಕೃತ ನಿವಾಸದಲ್ಲಿ ಪಕ್ಷದ ಹಿರಿಯ ಮುಖಂಡರ ಜತೆ ಸಭೆ ನಡೆಸಿದ ಅವರು, ಮುಂಬರುವ ಲೋಕಸಭಾ ಚುನಾವಣೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಅಭಿಪ್ರಾಯ ಪಡೆದರು. ನಿತೀಶ್ ಅವರ ಕಾರ್ಯಕ್ರಮಗಳು ಇಂಡಿಯಾ ಮೈತ್ರಿಕೂಟಕ್ಕೆ ಸಂಬಂಧಿಸಿದ್ದು ಅಲ್ಲವಾದರೂ, ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯಬೇಕು ಎಂಬ ಇಂಡಿಯಾ ಮೈತ್ರಿಕೂಟದ ಕಾರ್ಯಸೂಚಿಗೆ ಪೂರಕವಾದದ್ದು ಎಂದು ಪಕ್ಷದ ರಾಷ್ಟ್ರೀಯ ಮುಖ್ಯ ವಕ್ತಾರ ಕೆ.ಸಿ.ತ್ಯಾಗಿ ಹೇಳಿದ್ದಾರೆ.
ಪ್ರಧಾನಿ ಕ್ಷೇತ್ರ ಎಂಬ ಕಾರಣಕ್ಕೆ ವಾರಾಣಾಸಿಯನ್ನು ಪ್ರಚಾರ ಕೈಗೊಳ್ಳಲು ಆಯ್ಕೆ ಮಾಡಿದ್ದಲ್ಲ ಎಂದು ಸ್ಪಷ್ಟಪಡಿಸಿದ ಅವರು, ಸಮಾಜವಾದಿಗಳ ಭದ್ರ ನೆಲೆ ಹಾಗೂ ರಾಜನಾರಾಯಣ್ ಅವರ ಕ್ಷೇತ್ರವಾದ್ದರಿಂದ ಈ ಕ್ಷೇತ್ರದಿಂದಲೇ ಪ್ರಚಾರ ಆರಂಭಿಸಲಾಗುತ್ತಿದೆ ಎಂದು ಹೇಳಿದರು.