ಬಿಹಾರ | ಹೊಟ್ಟೆಗೆ ಗುಂಡೇಟು ತಗುಲಿದರೂ ಜೀಪ್ ಚಲಾಯಿಸಿ ಪ್ರಯಾಣಿಕರನ್ನು ರಕ್ಷಿಸಿದ ಚಾಲಕ
ಸಾಂದರ್ಭಿಕ ಚಿತ್ರ | PC : freepik.com
ಅರಾ: ಹೊಟ್ಟೆಗೆ ಗುಂಡೇಟು ತಗುಲಿದರೂ ಧೈರ್ಯಗುಂದದ ಚಾಲಕನ ಅಪ್ರತಿಮ ಶೌರ್ಯದಿಂದ ಜೀಪಿನಲ್ಲಿದ್ದ ಪ್ರಯಾಣಿಕರ ಜೀವ ಉಳಿದಿರುವ ಘಟನೆ ಬಿಹಾರದ ಭೋಜ್ ಪುರ್ ಜಿಲ್ಲೆಯಲ್ಲಿ ನಡೆದಿದೆ ಎಂದು ಶನಿವಾರ ಪೊಲೀಸರು ತಿಳಿಸಿದ್ದಾರೆ.
ಸಂತೋಷ್ ಸಿಂಗ್ ಎಂಬ ಚಾಲಕ ‘ತಿಲಕ’ ಕಾರ್ಯಕ್ರಮವನ್ನು ಮುಗಿಸಿಕೊಂಡು ವಾಪಸು ಮರಳುತ್ತಿದ್ದ 14-15 ಮಂದಿ ಪ್ರಯಾಣಿಕರನ್ನು ತನ್ನ ಜೀಪಿನಲ್ಲಿ ಕರೆದೊಯ್ಯುತ್ತಿದ್ದಾಗ, ಜೀಪನ್ನು ಮೋಟಾರ್ ಬೈಕ್ ನಲ್ಲಿ ಹಿಂಬಾಲಿಸಿರುವ ಹಂತಕರು, ಝೌನ್ ಜಿಲ್ಲೆಯ ಬಳಿ ಜೀಪಿನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಹಾರಿದ ಗುಂಡೊಂದು ಚಾಲಕ ಸಂತೋಷ್ ಸಿಂಗ್ ಹೊಟ್ಟೆಗೆ ತಾಕಿದೆ. ಗುಂಡೇಟಿನಿಂದ ಗಾಯಗೊಂಡು, ನೋವನುಭವಿಸುತ್ತಿದ್ದರೂ ಧೈರ್ಯಗುಂದದ ಸಂತೋಷ್ ಸಿಂಗ್, ಕೆಲವು ಕಿಲೋಮೀಟರ್ ವರೆಗೆ ಜೀಪನ್ನು ಚಲಾಯಿಸಿದ್ದಾರೆ. ಆ ಮೂಲಕ ಪ್ರಯಾಣಿಕರ ಸುರಕ್ಷತೆಯನ್ನು ಖಾತರಿಗೊಳಿಸಿದ್ದಾರೆ. ನಂತರ, ಸುರಕ್ಷಿತ ಸ್ಥಳವೊಂದರಲ್ಲಿ ಜೀಪನ್ನು ನಿಲ್ಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಕುರಿತು ಜೀಪಿನಲ್ಲಿ ತೆರಳುತ್ತಿದ್ದ ಮತ್ತೋರ್ವ ಪ್ರಯಾಣಿಕ ಪೊಲೀಸರಿಗೆ ಮಾಹಿತಿ ನೀಡಿದ್ದು, ಸುದ್ದಿ ತಿಳಿಯುತ್ತಿದ್ದಂತೆಯೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಗಾಯಗೊಂಡಿದ್ದ ಚಾಲಕ ಸಂತೋಷ್ ಸಿಂಗ್ ರನ್ನು ಸಮೀಪದ ಆಸ್ಪತ್ರೆಯೊಂದಕ್ಕೆ ದಾಖಲಿಸಿದ್ದಾರೆ. ಈ ಘಟನೆ ಬುಧವಾರ ಮಧ್ಯರಾತ್ರಿ ನಡೆದಿದೆ ಎಂದು ಹೇಳಲಾಗಿದೆ.
ಅರಾದ ಆಸ್ಪತ್ರೆಯೊಂದರಲ್ಲಿ ಚಾಲಕ ಸಂತೋಷ್ ಸಿಂಗ್ ಗೆ ಶಸ್ತ್ರಚಿಕಿತ್ಸೆ ನೆರವೇರಿಸಿ ಗುಂಡು ಹೊರ ತೆಗೆಯಲಾಗಿದ್ದು, ಅವರು ಅಪಾಯದಿಂದ ಪಾರಾಗಿದ್ದಾರೆ. ಅವರನ್ನು ಇನ್ನೂ ಕೆಲವು ದಿನಗಳ ಕಾಲ ವೈದ್ಯರ ನಿಗಾದಲ್ಲಿಡಲಾಗುವುದು ಎಂದು ಶನಿವಾರ ಜಗದೀಶ್ ಪುರ್ ನ ಉಪ ವಿಭಾಗೀಯ ಪೊಲೀಸ್ ಅಧಿಕಾರಿ ರಾಜೀವ್ ಚಂದ್ರ ಸಿಂಗ್ PTI ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.