ಬಿಹಾರ: ಜೆಡಿಯು ಶಾಸಕನ ಸಂಬಂಧಿಯ ಗುಂಡು ಹಾರಿಸಿ ಹತ್ಯೆ

ಸಾಂದರ್ಭಿಕ ಚಿತ್ರ | PC : freepik.com
ಪಾಟ್ನಾ: ಜೆಡಿಯು ಶಾಸಕ ಪನ್ನಾಲಾಲ್ ಸಿಂಗ್ ಪಟೇಲ್ ಅವರ ದೂರದ ಸಂಬಂಧಿಯಾಗಿರುವ 50 ವರ್ಷದ ವ್ಯಕ್ತಿಯನ್ನು ಅಪರಿಚಿತ ಬಂದೂಕುದಾರಿಗಳು ಬಿಹಾರದ ಖಗರಿಯಾ ಜಿಲ್ಲೆಯಲ್ಲಿ ಗುರುವಾರ ಗುಂಡು ಹಾರಿಸಿ ಹತ್ಯೆಗೈದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತಪಟ್ಟ ವ್ಯಕ್ತಿಯನ್ನು ಖಗರಿಯಾ ಕೈಥಿ ಟೋಲಾದ ನಿವಾಸಿ ಕೌಶಲ್ ಸಿಂಗ್ ಎಂದು ಗುರುತಿಸಲಾಗಿದೆ. ಕೌಶಲ್ ಸಿಂಗ್ ತನ್ನ ಪತ್ನಿಯೊಂದಿಗೆ ಬೈಕ್ ನಲ್ಲಿ ಮಂಗಳವಾರ ಛೌತಂ ಪೊಲೀಸ್ ಠಾಣಾ ವ್ಯಾಪ್ತಿಯ ಕೈಥಿ ಟೋಲಾದಲ್ಲಿರುವ ತನ್ನ ಮನೆಗೆ ಹಿಂದಿರುಗುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಅವರು ಹೇಳಿದ್ದಾರೆ.
ದುಷ್ಕರ್ಮಿಗಳು ತೀರಾ ಸಮೀಪದಿಂದ ಕೌಶಲ್ ಗೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಇದರಿಂದ ಅವರು ಗಂಭೀರ ಗಾಯಗೊಂಡರು. ಅವರನ್ನು ಕೂಡಲೇ ಸಮೀಪದ ಛೌಥಂನಲ್ಲಿರುವ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು.
ಅನಂತರ ಕೌಶಲ್ ಅವರ ಪತ್ನಿ ಈ ಹತ್ಯೆಯಲ್ಲಿ ಭಾಗಿಯಾದ ಶಂಕಿತರ ಹೆಸರನ್ನು ಬಹಿರಂಗಪಡಿಸಿದ್ದಾರೆ. ಆದರೆ, ಈ ಘಟನೆಗೆ ಸಂಬಂಧಿದ ತನಿಖೆಯಲ್ಲಿ ಪೊಲೀಸರು ಯಾವುದೇ ಪ್ರಗತಿ ಸಾಧಿಸಿಲ್ಲ.
ಈ ಘಟನೆ ಮೇಲ್ನೋಟಕೆ ಕೌಟುಂಬಿಕ ಕಲಹದಂತೆ ಕಾಣುತ್ತದೆ ಎಂದು ಖಗರಿಯಾದ ಪೊಲೀಸ್ ಅಧೀಕ್ಷಕ ರಾಕೇಶ್ ಕುಮಾರ್ ತಿಳಿಸಿದ್ದಾರೆ.
ನಾವು ಆರೋಪಿಯನ್ನು ಅತಿ ಶೀಘ್ರದಲ್ಲಿ ಬಂಧಿಸಲು ವಿಶೇಷ ತಂಡವನ್ನು ರೂಪಿಸಿದ್ದೇವೆ. ಕೌಶಲ್ ಅವರ ಪತ್ನಿಯ ಹೇಳಿಕೆಯನ್ನು ಕೂಡ ದಾಖಲಿಸಿಕೊಂಡಿದ್ದೇವೆ ಎಂದು ಕುಮಾರ್ ಹೇಳಿದ್ದಾರೆ.