ಬಿಹಾರ | ಕಸ್ಟಡಿಯಲ್ಲಿ ವ್ಯಕ್ತಿ, ಅಪ್ರಾಪ್ತ ವಯಸ್ಕ ಪತ್ನಿ ಆತ್ಮಹತ್ಯೆ; ಪೋಲಿಸ್ ಠಾಣೆಗೆ ಬೆಂಕಿ ಹಚ್ಚಿದ ಗುಂಪು
ಸಾಂದರ್ಭಿಕ ಚಿತ್ರ
ಅರಾರಿಯಾ : ಬಾಲ್ಯವಿವಾಹದ ಆರೋಪದಲ್ಲಿ ಗುರುವಾರ ಪೋಲಿಸರು ವಶಕ್ಕೆ ತೆಗೆದುಕೊಂಡಿದ್ದ 32ರ ಹರೆಯದ ವ್ಯಕ್ತಿ ಮತ್ತು ಆತನ ಅಪ್ರಾಪ್ತ ವಯಸ್ಕ ಪತ್ನಿ ಪೋಲಿಸ್ ಠಾಣೆಯ ಲಾಕಪ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಿಹಾರದ ಅರಾರಿಯಾ ಜಿಲ್ಲೆಯ ತರಾಬರಿಯಲ್ಲಿ ನಡೆದಿದೆ.
ಪೋಲಿಸರ ಚಿತ್ರಹಿಂಸೆ ಅವರ ಸಾವಿಗೆ ಕಾರಣ ಎಂದು ಆರೋಪಿಸಿ ಆಕ್ರೋಶಿತ ಸ್ಥಳೀಯರು ಶುಕ್ರವಾರ ಪೋಲೀಸ್ ಠಾಣೆಯಲ್ಲಿ ದಾಂಧಲೆ ನಡೆಸಿ ಬೆಂಕಿ ಹಚ್ಚಿದ್ದಲ್ಲದೆ ಪೋಲಿಸರ ಮೇಲೆ ಕಲ್ಲು ತೂರಾಟವನ್ನೂ ನಡೆಸಿದ್ದಾರೆ. ಗುಂಪು ಪೋಲಿಸ್ ವಾಹನಗಳಿಗೂ ಬೆಂಕಿ ಹಚ್ಚಿದೆ.
ಉದ್ರಿಕ್ತ ಗುಂಪನ್ನು ಚದುರಿಸಲು ಲಾಠಿ ಪ್ರಹಾರ ನಡೆಸಿದ್ದ ಪೋಲಿಸರು ಬಳಿಕ ಗಾಳಿಯಲ್ಲಿ ಗುಂಡುಗಳನ್ನು ಹಾರಿಸಿದ್ದು,ಇಬ್ಬರು ಗಾಯಗೊಂಡಿದ್ದಾರೆ. ಕಲ್ಲು ತೂರಾಟದಿಂದ ಅರಾರಿಯಾ ಎಎಸ್ಪಿ ಸೇರಿದಂತೆ ಪೋಲಿಸರೂ ಗಾಯಗೊಂಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ 17 ಜನರನ್ನು ಬಂಧಿಸಲಾಗಿದೆ,ಸಿಸಿಟಿವಿ ದೃಶ್ಯಾವಳಿಗಳ ನೆರವಿನಿಂದ ಇತರರನ್ನು ಗುರುತಿಸಲಾಗುತ್ತಿದೆ. ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ ಎಂದು ಎಸ್ಪಿ ಅಮಿತ್ ರಂಜನ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.
ಬಂಧಿತ ವ್ಯಕ್ತಿ ಎರಡು ದಿನಗಳ ಹಿಂದೆ ತನ್ನ ಮೊದಲ ಪತ್ನಿಯ 14ರ ಹರೆಯದ ತಂಗಿಯನ್ನು ಮದುವೆಯಾಗಿದ್ದ. ಬಾಲ್ಯವಿವಾಹದ ಆರೋಪದಲ್ಲಿ ಪೊಲೀಸರು ಇಬ್ಬರನ್ನೂ ವಶಕ್ಕೆ ತೆಗೆದುಕೊಂಡು ಲಾಕಪ್ಗೆ ತಳ್ಳಿದ್ದರು. ಶುಕ್ರವಾರ ಅವರಿಬ್ಬರ ಶವಗಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದವು.