ವಕ್ಫ್ ವಿವಾದದ ಕುರಿತು ನಿತೀಶ್ ಕುಮಾರ್, ಚಂದ್ರಬಾಬು ನಾಯ್ಡು ಮೌನವೇಕೆ?: ಮಮತಾ ಬ್ಯಾನರ್ಜಿ ಪ್ರಶ್ನೆ
ಎನ್ಡಿಎ ನಾಯಕರ ಪ್ರತಿಕ್ರಿಯೆ ಏನು?

ಮಮತಾ ಬ್ಯಾನರ್ಜಿ (Photo: PTI)
ಪಟ್ನಾ: ಸಂಸತ್ತಿನ ಉಭಯ ಸದನಗಳಲ್ಲಿ ವಕ್ಫ್ ತಿದ್ದುಪಡಿ ಮಸೂದೆಯನ್ನು ಬೆಂಬಲಿಸಿದ್ದಕ್ಕಾಗಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡುವನ್ನು ಟೀಕಿಸಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಬಿಹಾರದ ಎನ್ಡಿಎ ಮೈತ್ರಿಕೂಟದ ನಾಯಕರು ಬುಧವಾರ ವಾಗ್ದಾಳಿ ನಡೆಸಿದ್ದಾರೆ.
ಬುಧವಾರ ಕೋಲ್ಕತಾದಲ್ಲಿ ಮುಸ್ಲಿಂ ಧಾರ್ಮಿಕ ನಾಯಕರ ಜೊತೆ ಸಭೆ ನಡೆಸಿದ್ದ ಮಮತಾ ಬ್ಯಾನರ್ಜಿ, ವಕ್ಫ್ ವಿವಾದದ ಕುರಿತು ಮೌನ ವಹಿಸಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡುವನ್ನು ತರಾಟೆಗೆ ತೆಗೆದುಕೊಂಡಿದ್ದರು.
"ವಕ್ಫ್ ವಿವಾದದ ಕುರಿತು ನಿತೀಶ್ ಕುಮಾರ್ ಹಾಗೂ ಚಂದ್ರಬಾಬು ನಾಯ್ಡುವೇಕೆ ಮೌನವಾಗಿದ್ದಾರೆ? ಅವರು ಎನ್ಡಿಎ ಮೈತ್ರಿಕೂಟದ ಅಂಗಪಕ್ಷಗಳಾಗಿದ್ದು, ಒಂದಿಷ್ಟೂ ಅಧಿಕಾರವನ್ನು ಚಲಾಯಿಸದೆ ಮೌನವಾಗಿದ್ದಾರೆ" ಎಂದು ಅವರು ಟೀಕಿಸಿದ್ದರು.
ಮಮತಾ ಬ್ಯಾನರ್ಜಿಯವರ ಈ ಹೇಳಿಕೆ ಕುರಿತು ಪಟ್ನಾದಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಗಿರಿರಾಜ್ ಸಿಂಗ್, "ಇಂತಹ ಹೇಳಿಕೆಗಳನ್ನು ನೀಡುವ ಮೂಲಕ ಅವರು ಪಶ್ಚಿಮ ಬಂಗಾಳವನ್ನು ಬಾಂಗ್ಲಾದೇಶವನ್ನಾಗಿಸಲು ಬಯಸಿದ್ದಾರೆ. ನಿತೀಶ್ ಕುಮಾರ್ ವಿರುದ್ಧ ಇಂತಹ ಹೇಳಿಕೆ ನೀಡಲು ಅವರಿಗೆಯಾವುದೇ ಅಧಿಕಾರವಿಲ್ಲ. ಆಕೆ ಮುರ್ಷಿದಾಬಾದ್ನಲ್ಲಿ ಹಿಂಸಾಚಾರವನ್ನು ನಿಯಂತ್ರಿಸುವಲ್ಲಿ ವಿಫಲರಾಗಿದ್ದಾರೆ. ಬಿಹಾರವೆಂದಿಗೂ ಪಶ್ಚಿಮ ಬಂಗಾಳವಾಗುವುದಿಲ್ಲ" ಎಂದು ಹರಿಹಾಯ್ದಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಜೆಡಿಯು ವಕ್ತಾರ ರಾಜೀವ್ ರಾಮನ್, "ನಿತೀಶ್ ಕುಮಾರ್ ಅವರು ಮಮತಾ ಬ್ಯಾನರ್ಜಿಯಿಂದ ಸಲಹೆ ಪಡೆಬೇಕಾದ ಅಗತ್ಯವಿಲ್ಲ. ಪಶ್ಚಿಮ ಬಂಗಾಳದಲ್ಲಿನ ಪರಿಸ್ಥಿತಿ ತೀವ್ರ ಕಳವಳಕಾರಿ ಸಂಗತಿಯಾಗಿದೆ. ಅದು ತನ್ನ ನಿಯಂತ್ರಣ ತಪ್ಪಿದೆ. ಬಿಹಾರದತ್ತ ನೋಡಿ, ರಾಜ್ಯದಲ್ಲಿ ಸಂಪೂರ್ಣ ಶಾಂತಿಯಿದೆ. ಕಳೆದ 20 ವರ್ಷಗಳಲ್ಲಿ ಬಿಹಾರದಲ್ಲಿ ಯಾವುದೇ ಗಲಭೆಗಳಾಗಿಲ್ಲ. ಆಕೆ ತಮ್ಮ ರಾಜ್ಯದ ಬಗ್ಗೆ ಮಾತ್ರ ಕಾಳಜಿ ವಹಿಸಬೇಕು" ಎಂದು ತಿರುಗೇಟು ನೀಡಿದ್ದಾರೆ.