ಬಿಹಾರ | ಶಿಕ್ಷಕನನ್ನು ಅಪಹರಿಸಿ ಯುವತಿ ಜೊತೆ ಬಲವಂತದ ವಿವಾಹ
30 ವರ್ಷಗಳಲ್ಲೇ ಅತಿ ಹೆಚ್ಚು ಬಲವಂತದ ವಿವಾಹ
Photo | @newindianexpress.com
ಪಾಟ್ನಾ: ಬಿಹಾರದ ಕತಿಹಾರ್ ಜಿಲ್ಲೆಯಲ್ಲಿ ಶಿಕ್ಷಕನೋರ್ವನನ್ನು ಅಪಹರಿಸಿ ಯುವತಿಯೋರ್ವಳ ಜೊತೆ ಬಲವಂತವಾಗಿ ವಿವಾಹ ಮಾಡಿಸಿರುವ ಘಟನೆ ನಡೆದಿದ್ದು, ಕಳೆದ 30 ವರ್ಷಗಳಲ್ಲಿ 2024 ರಲ್ಲಿ ಅತಿ ಹೆಚ್ಚು ಬಲವಂತದ ವಿವಾಹ ಪ್ರಕರಣಗಳು ವರದಿಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಕತಿಹಾರ್ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ಸಹಾಯಕ ಶಿಕ್ಷಕರಾಗಿ ನಿಯೋಜನೆಗೊಂಡಿದ್ದ ಅವನೀಶ್ ಕುಮಾರ್ ರಿಕ್ಷಾದಲ್ಲಿ ಶಾಲೆಗೆ ತೆರಳುತ್ತಿದ್ದಾಗ ಕಾರಿನಲ್ಲಿ ಬಂದ ತಂಡವೊಂದು ಅವರನ್ನು ಅಡ್ಡಗಟ್ಟಿ ಬಂದೂಕು ತೋರಿಸಿ ಅಪಹರಿಸಿದೆ. ಬಳಿಕ ಶಿಕ್ಷಕನನ್ನು ಎರಡರಿಂದ ಮೂರು ಕಿಲೋಮೀಟರ್ ದೂರದ ದೇವಸ್ಥಾನವೊಂದಕ್ಕೆ ಕರೆದೊಯ್ಯಲಾಗಿದೆ. ದೇವಾಲಯದಲ್ಲಿ ಜಮಾಯಿಸಿದ್ದ ಜನ ಅವನೀಶ್ ಅವರನ್ನು ಬೆದರಿಸಿ ಗುಂಜನ್ ಕುಮಾರಿಯನ್ನು ವಿವಾಹವಾಗುವಂತೆ ಒತ್ತಾಯಿಸಿದ್ದಾರೆ. ಈ ವೇಳೆ ಅವನೀಶ್ ವಿರೋಧವನ್ನು ವ್ಯಕ್ತಪಡಿಸಿದರೂ ಪುರೋಹಿತರನ್ನು ಕರೆಸಿ ಮಂತ್ರ ಪಠಿಸುವ ಮೂಲಕ ವಿವಾಹ ಕಾರ್ಯವನ್ನು ನೆರವೇರಿಸಿದ್ದಾರೆ.
ವಿವಾಹ ಕಾರ್ಯ ನೆರವೇರಿಸಿ ಇಬ್ಬರನ್ನೂ ಬೇಗುಸರಾಯ್ ಜಿಲ್ಲೆಯ ಅವನೀಶ್ ಅವರ ಗ್ರಾಮಕ್ಕೆ ಕರೆದೊಯ್ಯಲಾಗಿದೆ. ಬೇಗುಸರಾಯ್ ಜಿಲ್ಲೆಯ ಮುಫಾಸಿಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಹನ ನಿಲ್ಲಿಸಿದಾಗ ಅವನೀಶ್ ವಾಹನದಿಂದ ಇಳಿದು ಪರಾರಿಯಾಗಿದ್ದಾನೆ. ಆದರೆ ಮಧುಮಗಳು ಮತ್ತು ಆಕೆಯ ಸಂಬಂಧಿಕರು ವರನ ಮನೆಗೆ ತೆರಳಿದ್ದಾರೆ, ಈ ವೇಳೆ ಆಕೆಯನ್ನು ಮನೆಗೆ ಸೇರಿಸಿಕೊಳ್ಳಲು ಅವನೀಶ್ ಕುಟುಂಬಸ್ಥರು ನಿರಾಕರಿಸಿದ್ದಾರೆ.
ಇದರಿಂದಾಗಿ ವಧು ಮುಫಾಸಿಲ್ ಪೊಲೀಸ್ ಠಾಣೆಗೆ ತೆರಳಿ ಅವನೀಶ್ ವಿರುದ್ಧ ದೂರು ನೀಡಿದ್ದಾರೆ. ಅವನೀಶ್ ನಾಲ್ಕು ವರ್ಷಗಳಿಂದ ನನ್ನ ಜೊತೆ ಸಂಬಂಧದಲ್ಲಿದ್ದು ಶಿಕ್ಷಕನಾಗಿ ಆಯ್ಕೆಯಾದ ಬಳಿಕ ನನಗೆ ಮೋಸ ಮಾಡಿದ್ದಾನೆ ಎಂದು ದೂರು ನೀಡಿದ್ದಾರೆ.