ಬಿಲ್ಕಿಸ್ ಬಾನು ಪ್ರಕರಣ: ಅಪರಾಧಿ ದಂಡ ಪಾವತಿಸಿದ್ದು ಹೇಗೆ ಎಂದು ಪ್ರಶ್ನಿಸಿದ ಸುಪ್ರೀಂ ಕೋರ್ಟ್
ಬಿಲ್ಕಿಸ್ ಬಾನು | Photo: PTI
ಹೊಸದಿಲ್ಲಿ: 2002ರ ಗುಜರಾತ್ ಹತ್ಯಾಕಾಂಡದ ಸಂದರ್ಭ ಬಿಲ್ಕಿಸ್ ಬಾನು ಅವರನ್ನು ಅತ್ಯಾಚಾರಗೈದ ಹಾಗೂ ಅವರ ಕುಟುಂಬದ 7 ಮಂದಿಯನ್ನು ಹತ್ಯೆಗೈದ ಪ್ರಕರಣದಲ್ಲಿ ಅವಧಿ ಪೂರ್ವ ಬಿಡುಗಡೆಯಾದ ಅಪರಾಧಿಗಳ ಪೈಕಿ ಓರ್ವ ವಿಚಾರಣಾ ನ್ಯಾಯಾಲಯ ವಿಧಿಸಿದ ದಂಡ ಪಾವತಿಸಲು ಸಾಧ್ಯವಾದದ್ದು ಹೇಗೆ ಎಂದು ಸುಪ್ರೀಂ ಕೋರ್ಟ್ ಗುರುವಾರ ಪ್ರಶ್ನಿಸಿದೆ.
ಈ ಪ್ರಕರಣದಲ್ಲಿ ಶಿಕ್ಷೆ ಪೂರ್ಣಗೊಳ್ಳುವ ಮೊದಲೇ 11 ಅಪರಾಧಿಗಳನ್ನು ಬಿಡುಗಡೆ ಮಾಡಿರುವ ಸರಕಾರದ ನಿರ್ಧಾರ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಹಾಗೂ ಉಜ್ಜಲ್ ಭುಯಾನ್ ಅವರಿದ್ದ ಪೀಠ ನಡೆಸಿತು.
ಅಪರಾಧಿ ಮುಂಬೈಯಲ್ಲಿರುವ ವಿಚಾರಣಾ ನ್ಯಾಯಾಲಯವನ್ನು ಸಂಪರ್ಕಿಸಿದ್ದಾರೆ ಹಾಗೂ ಅವರ ಮೇಲೆ ವಿಧಿಸಿದ್ದ ದಂಡವನ್ನು ಪಾವತಿಸಿದ್ದಾರೆ ಎಂದು ಅಪರಾಧಿ ರಮೇಶ್ ರೂಪಾ ಭಾಯ್ ಚಂದನ ಪರ ಹಾಜರಾಗಿದ್ದ ಹಿರಿಯ ವಕೀಲ ಸಿದ್ಧಾರ್ಥ್ ಲುತ್ರಾ ಅವರು ಪೀಠಕ್ಕೆ ತಿಳಿಸಿದರು.
ದಂಡ ಪಾವತಿಸದೇ ಇರುವುದು ಜೈಲು ಶಿಕ್ಷೆ ರದ್ದತಿ ಮೇಲೆ ಪರಿಣಾಮ ಬೀರುತ್ತದೆಯೇ? ದಂಡ ಪಾವತಿಸದೇ ಇರುವುದು ಪ್ರಕರಣದ ಅರ್ಹತೆ ಮೇಲೆ ಪರಿಣಾಮ ಬೀರುತ್ತದೆ ಎಂದು ನೀವು ಭಾವಿಸಿದ್ದೀರಾ? ಮೊದಲು ನೀವು ಅನುಮತಿ ಕೇಳಬೇಕಿತ್ತು. ಈಗ ನೀವು ಅನುಮತಿ ಇಲ್ಲದೆ ದಂಡ ಪಾವತಿಸಿದ್ದೀರಿ ಎಂದು ಪೀಠ ಹೇಳಿತು.
ನ್ಯಾಯಾಲಯದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಲುಥ್ರಾ, ದಂಡ ಪಾವತಿಸದೇ ಇರುವುದರಿಂದ ಬಿಡುಗಡೆಯ ಮೇಲಿನ ನಿರ್ಧಾರದ ಮೇಲೆ ಪರಿಣಾಮ ಬೀರುವುದಿಲ್ಲ. ಆದರೆ, ವಿವಾದದಿಂದ ಮುಕ್ತವಾಗಲು ತಾನೇ ತನ್ನ ಕಕ್ಷಿದಾರನಿಗೆ ದಂಡ ಪಾವತಿಸುವಂತೆ ಸಲಹೆ ನೀಡಿದೆ ಎಂದರು.
ಅನಂತರ ನ್ಯಾಯಪೀಠ ವಿಚಾರಣೆಯನ್ನು ಸೆಪ್ಟಂಬರ್ 14ಕ್ಕೆ ಮುಂದೂಡಿತು.