ಭಾರತವನ್ನು ʼಪ್ರಯೋಗಾಲಯ' ಎಂದು ಕರೆದ ಬಿಲ್ ಗೇಟ್ಸ್: ವ್ಯಾಪಕ ಟೀಕೆ
ಬಿಲ್ ಗೇಟ್ಸ್ (Photo: PTI)
ಹೊಸದಿಲ್ಲಿ: ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಇತ್ತೀಚೆಗೆ ಪೋಡ್ ಕ್ಯಾಸ್ಟ್ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಭಾರತವನ್ನು ʼಪ್ರಯೋಗಾಲಯದಂತೆ ಪರಿಗಣಿಸಿರುವುದಾಗಿʼ ಹೇಳಿಕೊಂಡಿದ್ದು, ವಿವಾದಕ್ಕೆ ಕಾರಣವಾಗಿದೆ.
ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ರೀಡ್ ಹಾಫ್ ಮ್ಯಾನ್ ಜೊತೆಗೆ ಪಾಡ್ ಕ್ಯಾಸ್ಟ್ ಸಂವಾದದಲ್ಲಿ ಮಾತನಾಡುತ್ತಾ, ಭಾರತವನ್ನು ಒಂದು ರೀತಿಯ ಪ್ರಯೋಗಶಾಲೆಯಂತೆ ಪರಿಗಣಿಸಿರುವುದಾಗಿ ಹೇಳಿದ್ದು, ಈ ಕುರಿತ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ಬಿಲ್ ಗೇಟ್ಸ್ ಹೇಳಿಕೆಗೆ ಹಲವರು ಮಿಶ್ರವಾಗಿ ಪ್ರತಿಕ್ರಿಯಿಸಿದ್ದಾರೆ.
ಈ ವರ್ಷದ ಆರಂಭದಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಬಿಲ್ ಗೇಟ್ಸ್, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದಾರೆ. ದೇಶವು ಆರೋಗ್ಯ, ಪೋಷಣೆ ಮತ್ತು ಶಿಕ್ಷಣದಲ್ಲಿ ಪ್ರಗತಿ ಸಾಧಿಸುತ್ತಿದ್ದು, ಮುಂಬರುವ ದಶಕಗಳಲ್ಲಿ ಮತ್ತಷ್ಟು ಪ್ರಗತಿ ಸಾಧಿಸುವ ಬಗ್ಗೆ ಭವಿಷ್ಯವನ್ನು ನುಡಿದಿದ್ದರು.
ಭಾರತದಲ್ಲಿ ಆರೋಗ್ಯ, ಶಿಕ್ಷಣ, ಪೌಷ್ಟಿಕತೆಯ ಪರಿಸ್ಥಿತಿ ಉತ್ತಮಗೊಳ್ಳುತ್ತಿದೆ. ಸಾಕಷ್ಟು ಸ್ಥಿರತೆ ಸಾಧಿಸಲಾಗಿದೆ. ಸರ್ಕಾರಕ್ಕೂ ಆದಾಯ ತಂದುಕೊಡುತ್ತಿದೆ. ಮುಂದಿನ 20 ವರ್ಷದಲ್ಲಿ ಅಲ್ಲಿನ ಜನರು ಇನ್ನೂ ಉತ್ತಮ ಸ್ಥಿತಿ ಪಡೆಯಬಹುದು. ಭಾರತದಂತಹ ದೇಶವು ಪ್ರಯೋಗಾಲಯದಂತಿದ್ದು, ಹೊಸ ಪ್ರಯೋಗಗಳನ್ನು ಮಾಡಬಹುದು ಎಂದು ಸಂದರ್ಶನದಲ್ಲಿ ಬಿಲ್ ಗೇಟ್ಸ್ ಹೇಳಿದ್ದಾರೆ.
ಬಿಲ್ ಗೇಟ್ಸ್ ಹೇಳಿಕೆ ಬಗ್ಗೆ ಸಾಮಾಜಿಕ ಜಾಲತಾಣಗಳ ಬಳಕೆದಾರರು ಭಿನ್ನವಾಗಿ ಪ್ರತಿಕ್ರಿಯಿಸಿದ್ದಾರೆ. ಕೆಲವರು ಬಿಲ್ ಗೇಟ್ಸ್ ನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಭಾರತವು ಪ್ರಯೋಗಾಲಯವಾಗಿದೆ ಮತ್ತು ಬಿಲ್ ಗೇಟ್ಸ್ ಗೆ ನಾವು ಭಾರತೀಯರು ಗಿನಿಯಿಲಿಗಳು, ಈ ವ್ಯಕ್ತಿ ಸರ್ಕಾರದಿಂದ ವಿರೋಧ ಪಕ್ಷಗಳಿಂದ ಹಿಡಿದು ಮಾಧ್ಯಮದವರೆಗೆ ಎಲ್ಲರನ್ನೂ ನಿರ್ವಹಿಸಿದ್ದಾರೆ ಅವರ ಕಚೇರಿ FCRA ಇಲ್ಲದೆ ಇಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ನಮ್ಮ ಶಿಕ್ಷಣ ವ್ಯವಸ್ಥೆಯು ಅವರನ್ನು ಹೀರೋ ಮಾಡಿದೆ. ನಾವು ಯಾವಾಗ ಎಚ್ಚರಗೊಳ್ಳುತ್ತೇವೆ ಎಂದು ನನಗೆ ತಿಳಿದಿಲ್ಲ ಎಂದು ವ್ಯಕ್ತಿಯೋರ್ವರು ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.