ಕೃತಕ ಬುದ್ಧಿಮತ್ತೆ(AI)ಯಿಂದ ಉದ್ಯೋಗಿಗಳ ಹಕ್ಕು ರಕ್ಷಿಸಲು ರಾಜ್ಯಸಭೆಯಲ್ಲಿ ಖಾಸಗಿ ಮಸೂದೆ ಮಂಡನೆ

ಸಾಂದರ್ಭಿಕ ಚಿತ್ರ | PC : PTI
ಹೊಸದಿಲ್ಲಿ: ರಾಜ್ಯಸಭೆಯಲ್ಲಿ ಶುಕ್ರವಾರ 50 ಖಾಸಗಿ ಮಸೂದೆಗಳು ಮಂಡನೆಯಾಗಿದ್ದು, ಈ ಪೈಕಿ ಉದ್ಯೋಗ ಸ್ಥಳಗಳಲ್ಲಿ ಕೃತಕ ಬುದ್ಧಿಮತ್ತೆ(AI)ಯ ಬಳಕೆ ಮತ್ತು ಜಾರಿಯಿಂದ ಉದ್ಯೋಗಿಗಳ ಹಕ್ಕುಗಳ ರಕ್ಷಣೆಗೆ ಕೋರಿರುವ ಮಸೂದೆ, ಡೀಪ್ ಫೇಕ್ ತುಣುಕುಗಳ ಸೃಷ್ಟಿ ಹಾಗೂ ಬಳಕೆಯನ್ನು ತಡೆದು, ಅವನ್ನು ಅಪರಾಧೀಕರಣಗೊಳಿಸಲು ಕೋರಿರುವ ಮಸೂದೆಯೂ ಮಂಡನೆಯಾದವು.
ಉದ್ಯೋಗ ಸ್ಥಳಗಳಲ್ಲಿ ಕೃತಕ ಬುದ್ಧಿಮತ್ತೆ(AI)ಯ ಬಳಕೆ ಮತ್ತು ಜಾರಿಯಿಂದ ಉದ್ಯೋಗಿಗಳ ಹಕ್ಕುಗಳ ರಕ್ಷಣೆಗೆ ಕೋರಿರುವ ಉದ್ಯೋಗಿಗಳ ಹಕ್ಕುಗಳ ರಕ್ಷಣೆ ಮಸೂದೆ, 2023 ಅನ್ನು ಟಿಎಂಸಿ ಸದಸ್ಯೆ ಮೌಸಮ್ ಬಿ ನೂರ್ ಮಂಡಿಸಿದರು. ಉದ್ಯೋಗ ಸ್ಥಳಗಳಲ್ಲಿ ಕೃತಕ ಬುದ್ಧಿಮತ್ತೆ(AI) ತಂತ್ರಜ್ಞಾನಗಳನ್ನು ಜಾರಿಗೊಳಿಸುವಾಗ ಅದರ ಬಳಕೆಯನ್ನು ನಿಯಂತ್ರಿಸಬೇಕು ಹಾಗೂ ಪಾರದರ್ಶಕತೆಯನ್ನು ಖಾತರಿಗೊಳಿಸಬೇಕು ಎಂದೂ ಈ ಮಸೂದೆಯಲ್ಲಿ ಮನವಿ ಮಾಡಲಾಗಿದೆ.
ಇದರೊಂದಿಗೆ ಡೀಪ್ ಫೇಕ್ ತಡೆ ಹಾಗೂ ಅಪರಾಧೀಕರಣ ಮಸೂದೆ, 2023 ಅನ್ನೂ ನೂರ್ ಮಂಡಿಸಿದರು. ಸಮ್ಮತವಿಲ್ಲದೆ ಅಥವಾ ಡಿಜಿಟಲ್ ವಾಟರ್ ಮಾರ್ಕ್ ಇಲ್ಲದೆ ಡೀಪ್ ಫೇಕ್ ತುಣುಕುಗಳ ಸೃಷ್ಟಿ, ಪ್ರಸರಣ ಹಾಗೂ ಬಳಕೆಯನ್ನು ಅಪರಾಧೀಕರಣಗೊಳಿಸಬೇಕು ಎಂದು ಈ ಮಸೂದೆಯಲ್ಲಿ ಕೋರಲಾಗಿದೆ.
ಇದರೊಂದಿಗೆ, ಆಡಳಿತಾರೂಢ ಬಿಜಪಿ, ವಿರೋಧ ಪಕ್ಷಗಳಾದ ಟಿಎಂಸಿ, ಕಾಂಗ್ರೆಸ್, ಆರ್ಜೆಡಿ, ಸಿಪಿಐ, ಸಿಪಿಐ(ಎಂ) ಹಾಗೂ ಆಪ್ ಸದಸ್ಯರೂ ವಿವಿಧ ಖಾಸಗಿ ಮಸೂದೆಗಳನ್ನು ಮಂಡಿಸಿದರು. ಈ ಪೈಕಿ ಸಂಸತ್ತು ಅಧಿವೇಶನದ ಅವಧಿಯನ್ನು ವರ್ಷದಲ್ಲಿ 100 ದಿನಗಳಿಂದ 120 ದಿನಗಳಿಗೆ ಏರಿಕೆ ಮಾಡಬೇಕು ಎಂದು ಕೋರಿರುವ ಎರಡು ಖಾಸಗಿ ಮಸೂದೆಗಳೂ ಭೋಜನ ವಿರಾಮದ ನಂತರ ರಾಜ್ಯಸಭೆಯಲ್ಲಿ ಮಂಡನೆಯಾದವು.