ಲಿಥಿಯಂ ಗಣಿಗಾರಿಕೆಗೆ ಖಾಸಗಿ ರಂಗಗಳಿಗೆ ಅವಕಾಶ ಕಲ್ಪಿಸುವ ಮಸೂದೆಗೆ ಲೋಕಸಭೆ ಅಂಗೀಕಾರ
ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ಭಾರತದ ಲಿಥಿಯಂ ನಿಕ್ಷೇಪಗಳ ಕ್ಷೇತ್ರವನ್ನು ಖಾಸಗಿ ರಂಗಕ್ಕೆ ತೆರೆಯುವ ಅವಕಾಶ ನೀಡುವ ಮೈನ್ಸ್ ಎಂಡ್ ಮಿನರಲ್ (ಡೆವಲೆಪ್ಮೆಂಟ್ ಎಂಡ್ ರೆಗ್ಯುಲೇಶನ್) ತಿದ್ದುಪಡಿ ಮಸೂದೆ 2023 ಗೆ ಲೋಕಸಭೆ ಶುಕ್ರವಾರ ಅನುಮೋದನೆ ನೀಡಿದೆ.
ಈ ಮಸೂದೆಯು ಇಲೆಕ್ಟ್ರಿಕ್ ವಾಹನಗಳ ಬ್ಯಾಟರಿಗಳ ತಯಾರಿಕೆಗೆ ಅತ್ಯಗತ್ಯವಾಗಿರುವ ಲಿಥಿಯಂ ಮತ್ತು ಐದು ಇತರ ಅಟಾಮಿಕ್ ಮಿನರಲ್ಗಳನ್ನು ನಿಷೇಧಿತ ವರ್ಗದಿಂದ ಹೊರತರುತ್ತದೆ. ಅಷ್ಟೇ ಅಲ್ಲದೆ ಆಳವಾಗಿ ಇರುವ ಖನಿಜಗಳಾದ ಚಿನ್ನ ಮತ್ತು ಬೆಳ್ಳಿಯ ಗಣಿಗಾರಿಕೆ ಕ್ಷೇತ್ರದಲ್ಲಿ ಖಾಸಗಿ ರಂಗದ ಪ್ರವೇಶಕ್ಕೂ ಅನುಮತಿ ದೊರೆಯಲಿದೆ.
ಈಗಿನ ಕಾನೂನಿನಡಿಯಲ್ಲಿ ಎಲ್ಲಾ 12 ಅಟಾಮಿಕ್ ಖನಿಜಗಳನ್ನು ಸರಕಾರಿ ಒಡೆತನದ ಸಂಸ್ಥೆಗಳು ಮಾತ್ರ ಗಣಿಗಾರಿಕೆ ನಡೆಸಬಹುದಾಗಿದೆ. ಆದರೆ ಈ ಮಸೂದೆಯು ಕಾನೂನಾದ ಮೇಲೆ ಲೀಥಿಯಂ ಹೊರತಾಗಿ ಬೆರಿಲಿಯಂ, ನಿಯೋಬಿಯಂ, ಟೈಟಾನಿಯಂ, ತಂಟಲುಮ್ ಮತ್ತು ಝಿರ್ಕೋನಿಯಂ ಖನಿಜಗಳ ಗಣಿಗಾರಿಕೆಗೆ ಖಾಸಗಿ ರಂಗಕ್ಕೂ ಅನುಮತಿ ದೊರೆಯಲಿದೆ.
ಈ ಖನಿಜಗಳು ಬಾಹ್ಯಾಕಾಶ, ಇಲೆಕ್ಟ್ರಾನಿಕ್ಸ್, ಸಂವಹನ, ಇಂಧನ, ಇಲೆಕ್ಟ್ರಿಕ್ ಬ್ಯಾಟರಿಗಳ ಕ್ಷೇತ್ರದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಹಾಗೂ ಶೂನ್ಯ ಇಂಗಾಲದ ಹೊರಸೂಸುವಿಕೆಯತ್ತ ಭಾರತದ ಬದ್ಧತೆಯನ್ನು ಕಾರ್ಯರೂಪಕ್ಕೆ ತರಲು ನಿರ್ಣಾಯಕವಾಗಿದೆ.
ಈ ತಿದ್ದುಪಡೆ ಮಸೂದೆ ಮಹತ್ತರ ಬದಲಾವಣೆಗಳಿಗೆ ಕಾರಣವಾಗಲಿದೆ ಎಂದು ಹೇಳಿದ ಕೇಂದ್ರ ಕಲ್ಲಿದ್ದಲು ಮತ್ತು ಗಣಿಗಾರಿಕೆ ಸಚಿವ ಪ್ರಹ್ಲಾದ್ ಜೋಷಿ, ಅದೇ ಸಮಯ ಬೀಚ್ ಮರಳು ಖನಿಜಗಳಾದ ಇಲ್ಮೆನೈಟ್, ರುಟೈಲ್, ಲೂಕೊಕ್ಸೀನ್, ಗಾರ್ನೆಟ್, ಮೊನಝೈಟ್, ಝಿರ್ಕಾನ್ ಮತ್ತು ಸಿಲ್ಲಿಮನೈಟ್ ಇವುಗಳ ಗಣಿಗಾರಿಕೆ ಈಗಲೂ ಸರಕಾರಿ ಸ್ವಾಮ್ಯದ ಸಂಸ್ಥೆಗಳ ವ್ಯಾಪ್ತಿಯಲ್ಲಿದೆ ಎಂದು ಹೇಳಿದ್ದಾರೆ.