ದಿಲ್ಲಿಯಲ್ಲಿ ಹೆಚ್ಚುತ್ತಿರುವ ವಿಮಾನಗಳಿಗೆ ಪಕ್ಷಿಗಳು ಡಿಕ್ಕಿ ಹೊಡೆಯುವ ಪ್ರಕರಣ
ನಿಯಂತ್ರಣಕ್ಕೆ ಮುಂದಾದ DIAL ; ಜನರಿಗೆ ಜಾಗೃತಿ ಮೂಡಿಸಲು ಪ್ರಯತ್ನ
ಸಾಂದರ್ಭಿಕ ಚಿತ್ರ | PC: X
ಹೊಸದಿಲ್ಲಿ : ವೈಮಾನಿಕ ಪ್ರದೇಶದಲ್ಲಿ ಪಕ್ಷಿಗಳು ಹಾರಾಟ ನಡೆಸುತ್ತಿರುವ ವಿಮಾನಗಳಿಗೆ ಡಿಕ್ಕಿ ಹೊಡೆಯುವ ಪ್ರಕರಣಗಳನ್ನು ತಗ್ಗಿಸಲು ದಿಲ್ಲಿ ವಿಮಾನ ನಿಲ್ದಾಣದ ಕಾರ್ಯಾಚರಣಾ ಸಂಸ್ಥೆಯಾದ ದಿಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ (DIAL) ಮುಂದಾಗಿದೆ.
ವಿಮಾನ ನಿಲ್ದಾಣದ ವನ್ಯಜೀವಿ ಅಪಾಯ ನಿರ್ವಹಣೆ ತಂಡವು ವಿಮಾನಗಳಿಗೆ ಪಕ್ಷಿಗಳು ಡಿಕ್ಕಿ ಹೊಡೆಯುವ ಪ್ರಕರಣಗಳನ್ನು ತಗ್ಗಿಸಲು ಈ ದಿಕ್ಕಿನಲ್ಲಿ ಹಲವಾರು ನಿಯಂತ್ರಣ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದು ಶುಕ್ರವಾರ ದಿಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತವು ಪ್ರಕಟಣೆಯಲ್ಲಿ ಹೇಳಿದೆ.
ಜಿಎಂಆರ್ ಸಮೂಹ ಸಂಸ್ಥೆಯ ನೇತೃತ್ವದ ಸಮೂಹ ಸಂಸ್ಥೆಯಾದ ದಿಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತವು ದಿಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರುವ ರಂಗಪುರಿ ಪಹರಿ ಪ್ರದೇಶದ ಸ್ಥಳೀಯ ಜನರಲ್ಲಿ ವಿಮಾನಗಳಿಗೆ ಡಿಕ್ಕಿ ಹೊಡೆಯುವ ವನ್ಯಜೀವಿಗಳು, ನಿರ್ದಿಷ್ಟವಾಗಿ ಪಕ್ಷಿಗಳ ಡಿಕ್ಕಿ ಸೃಷ್ಟಿಸುವ ಅಪಾಯದ ಕುರಿತು ಜಾಗೃತಿ ಮೂಡಿಸಲು ಒಂದು ವಾರ ಜಾಗೃತಿ ಅಭಿಯಾನವನ್ನೂ ನಡೆಸಲಿದೆ.
ರನ್ ವೇ 29ಎಲ್/11ಆರ್ ಗೆ ಅಭಿಮುಖವಾಗಿರುವ ರಂಗಪುರಿ ಪಹರಿ ಪ್ರದೇಶದಲ್ಲಿ ವಿಮಾನಗಳಿಗೆ ಪಕ್ಷಿಗಳು ಡಿಕ್ಕಿ ಹೊಡೆಯುವ ಘಟನೆಗಳು ಹೆಚ್ಚುತ್ತಿರುವುದರಿಂದ, ವಿಶೇಷವಾಗಿ ಮಾನ್ಸೂನ್ ಋತುವಿನಲ್ಲಿ ಈ ಪ್ರಮಾಣ ಹೆಚ್ಚಿರುವುದರಿಂದ ಈ ಜಾಗೃತಿ ಅಭಿಯಾನವನ್ನು ನಡೆಸಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ವಿಮಾನಗಳಿಗೆ ವನ್ಯಜೀವಿಗಳು ಡಿಕ್ಕಿ ಹೊಡೆಯುವ ಘಟನೆಗಳನ್ನು ತಗ್ಗಿಸಲು ನಮ್ಮ ವನ್ಯಜೀವಿ ಅಪಾಯ ನಿರ್ವಹಣಾ ತಂಡವು ಹಲವಾರು ನಿಯಂತ್ರಣ ಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ ಎಂದು ದಿಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿಗಮವು ಹೇಳಿದೆ.
“ಸ್ಥಳೀಯ ಸಂಸ್ಥೆಗಳ ಸಹಯೋಗದೊಂದಿಗೆ ವಾಯು ಪ್ರದೇಶದ 10 ಕಿಮೀ ಸುತ್ತಳತೆಯಲ್ಲಿ ಪಕ್ಷಿಗಳನ್ನು ಆಕರ್ಷಿಸುವ ವಸ್ತುಗಳನ್ನು ಗುರುತಿಸಿ, ಅವನ್ನು ಸ್ವಚ್ಛಗೊಳಿಸಲು ದೈನಂದಿನ ಸಮೀಕ್ಷೆಗಳನ್ನು ನಡೆಸಲಾಗುತ್ತಿದೆ” ಎಂದೂ ಪ್ರಕಟಣೆಯಲ್ಲಿ ಹೇಳಲಾಗಿದೆ.
ಈ ತಿಂಗಳ ಆರಂಭದಲ್ಲಿ ದುಬೈನಿಂದ ಆಗಮಿಸುತ್ತಿದ್ದ ಎಮಿರೇಟ್ಸ್ ವಿಮಾನಕ್ಕೆ ರಾಜಹಂಸ ಪಕ್ಷಿಗಳ ಗುಂಪೊಂದು ಡಿಕ್ಕಿ ಹೊಡೆದ ಪರಿಣಾಮ, ಮುಂಬೈನಲ್ಲಿ ಸುಮಾರು 40 ರಾಜಹಂಸ ಪಕ್ಷಿಗಳು ಮೃತಪಟ್ಟಿದ್ದವು.
ಈ ಘಟನೆಯ ನಂತರ ವಿಮಾನವು ಸುರಕ್ಷಿತವಾಗಿ ಭೂಸ್ಪರ್ಶ ಮಾಡಿತಾದರೂ, ವಿಮಾನಕ್ಕೆ ಕೊಂಚ ಮಟ್ಟಿನ ಹಾನಿಯಾಗಿತ್ತು.