ರಾಜ್ಯದಲ್ಲಿ ಶಾಂತಿ ನೆಲೆಯೂರುವಂತೆ ಮಾಡುವುದು ನನ್ನ ಮುಖ್ಯ ಕೆಲಸ: ರಾಜೀನಾಮೆ ಆಗ್ರಹಗಳ ನಡುವೆ ಮಣಿಪುರ ಸಿಎಂ ಪ್ರತಿಕ್ರಿಯೆ
ಮಣಿಪುರ ಸಿಎಂ ಬಿರೇನ್ ಸಿಂಗ್
ಹೊಸದಿಲ್ಲಿ: ಕಳೆದ ಹಲವು ದಿನಗಳಿಂದ ವ್ಯಾಪಕ ಹಿಂಸಾಚಾರಕ್ಕೆ ಸಾಕ್ಷಿಯಾಗಿರುವ ಮಣಿಪುರದಲ್ಲಿ ಇಬ್ಬರು ಆದಿವಾಸಿ ಮಹಿಳೆಯರ ಮೇಲೆ ನಡೆದ ಅಮಾನುಷ ದೌರ್ಜನ್ಯದ ವಿಚಾರ ದೇಶವ್ಯಾಪಿ ವ್ಯಾಪಕ ಆಕ್ರೋಶವುಂಟು ಮಾಡಿರುವ ಜೊತೆಗೆ ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ರಾಜೀನಾಮೆ ನೀಡಬೇಕೆಂಬ ಆಗ್ರಹವೂ ಬಲವಾಗಿ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಬಿರೇನ್ ಸಿಂಗ್ “ರಾಜ್ಯದಲ್ಲಿ ಶಾಂತಿ ನೆಲೆಸುವಂತೆ ಮಾಡುವುದು ನನ್ನ ಮುಖ್ಯ ಕೆಲಸ” ಎಂದಿದ್ದಾರೆ.
“…ಈ ಬಗ್ಗೆ ಹೆಚ್ಚು ಮಾತನಾಡಲು ಬಯಸುವುದಿಲ್ಲ. ರಾಜ್ಯದಲ್ಲಿ ಶಾಂತಿ ನೆಲೆಯೂರುವಂತೆ ಮಾಡುವುದು ನನ್ನ ಕೆಲಸ. ಕಿಡಿಗೇಡಿಗಳು ಪ್ರತಿ ಸಮಾಜದಲ್ಲಿದ್ದಾರೆ, ಅವರನ್ನು ಸುಮ್ಮನೆ ಬಿಡುವುದಿಲ್ಲ,” ಎಂದು ಸುದ್ದಿಸಂಸ್ಥೆಯೊಂದರ ಜೊತೆ ಮಾತನಾಡುತ್ತಾ ಅವರು ಹೇಳಿದರು.
“ಘಟನೆ ಬಗ್ಗೆ ರಾಜ್ಯಾದ್ಯಂತ ಜನರು ಪ್ರತಿಭಟನೆ ನಡೆಸುತ್ತಿದ್ದು ಆರೋಪಿಗಳಿಗೆ ಅತ್ಯಂತ ಕಠಿಣ ಶಿಕ್ಷೆಗೆ ಆಗ್ರಹಿಸಿದ್ದಾರೆ. ಈಗಾಗಲೇ ಬಂಧಿತನಾಗಿರುವ ಒಬ್ಬ ಆರೋಪಿಯ ಮನೆಯನ್ನು ನಿನ್ನೆ ಮಹಿಳೆಯರು ಸುಟ್ಟು ಹಾಕಿದ್ದಾರೆ,” ಎಂದು ಅವರು ಹೇಳಿದರು.
“ಮಣಿಪುರ ಸಮಾಜವು ಮಹಿಳೆಯರ ಮೇಲೆ ನಡೆಯುವ ಅಪರಾಧಗಳ ವಿರುದ್ಧವಾಗಿದೆ. ನಮ್ಮ ಸಮಾಜ ಮಹಿಳೆಯರನ್ನು ಮಾತೆಯರೆಂದು ಪರಿಗಣಿಸುತ್ತದೆ” ಎಂದು ಅವರು ಹೇಳಿದರು.