ತಮಿಳುನಾಡಿನಲ್ಲಿ ಬಿರಿಯಾನಿ ಮಾರುಕಟ್ಟೆ ಮೌಲ್ಯ 10,000 ಕೋಟಿ ರೂ.!
ತಮಿಳುನಾಡು ಜನರ ಪಾಲಿಗೆ ಬಿರಿಯಾನಿ ಕೇವಲ ಊಟವಲ್ಲ; ಒಂದು ಅನುಭವ
ಬಿರಿಯಾನಿ | Photo : Thehindu
ಚೆನ್ನೈ : ಭಾರತದ ಆಹಾರ ಸಂಸ್ಕೃತಿಗೆ ಮೊಘಲರ ಕೊಡುಗೆಯಾದ ಬಿರಿಯಾನಿಯ ಪರಿಮಳ ಹಾಗೂ ಸ್ವಾದಕ್ಕೆ ಮನಸೋಲದವರೇ ಇಲ್ಲ. ಇದೀಗ ಈ ಬಿರಿಯಾನಿಯು ತಮಿಳುನಾಡು ಆಹಾರ ಮಾರುಕಟ್ಟೆಯಲ್ಲಿ ಭಾರಿ ಕಂಪನವನ್ನೇ ಸೃಷ್ಟಿಸಿದ್ದು, 10,000 ಕೋಟಿ ರೂಪಾಯಿ ಮೌಲ್ಯ ಹೊಂದಿದೆ!
ತಮಿಳುನಾಡಿನಲ್ಲಿ ಸಂಘಟಿತ ಬಿರಿಯಾನಿ ಮಾರುಕಟ್ಟೆ ಮೌಲ್ಯ 2,500 ಕೋಟಿ ರೂಪಾಯಿಯಷ್ಟಿದ್ದರೆ, ಅಸಂಘಟಿತ ಮಾರುಕಟ್ಟೆ ಮೌಲ್ಯವು 7,500 ಕೋಟಿ ರೂಪಾಯಿಯಷ್ಟಿದೆ ಎನ್ನುತ್ತಾರೆ ತಮಿಳುನಾಡಿನ ಆಹಾರ ಮಾರುಕಟ್ಟೆ ವಿಶ್ಲೇಷಕರು. ಬಿರಿಯಾನಿಗೆ ಚೆನ್ನೈ ಬಹು ದೊಡ್ಡ ಮಾರುಕಟ್ಟೆಯಾಗಿದ್ದು, ಈ ಪ್ರಾಂತ್ಯದ ಆಹಾರ ವ್ಯಾಪಾರದ ಪೈಕಿ ಶೇ. 50ರಷ್ಟು ಮಾರುಕಟ್ಟೆ ಬಿರಿಯಾನಿಯದ್ದೇ ಆಗಿದೆ.
ತಮಿಳುನಾಡಿನ ಬಿರಿಯಾನಿ ಉದ್ಯಮದ ಪ್ರಮುಖ ಸಂಸ್ಥೆಗಳ ಪೈಕಿ ದಿಂಡಿಗಲ್ ತಲಪ್ಪಾಕಟ್ಟಿ, ಜೂನಿಯರ್ ಕುಪ್ಪಣ್ಣ, ಬುಖಾರಿ, ಅಂಜಪ್ಪರ್, ಸಲೀಂ ಆರ್ ಆರ್ ಬಿರಿಯಾನಿ, ಪೊನ್ನುಸ್ವಾಮಿ ಹಾಗೂ ಎಸ್ಎಸ್ ಹೈದರಾಬಾದಿ ಬಿರಿಯಾನಿ ಸೇರಿದಂತೆ ಹಲವು ಸಂಸ್ಥೆಗಳಿವೆ. ಈ ಪ್ರಖ್ಯಾತ ಬ್ರ್ಯಾಂಡ್ ಗಳೊಂದಿಗೆ, ಹಲವಾರು ಹೆಸರುಗಳಲ್ಲಿ ಕಾರ್ಯಾಚರಿಸುತ್ತಿರುವ ಮಧ್ಯಮ ಗಾತ್ರದ ಸಂಸ್ಥೆಗಳ ಬೃಹತ್ ಜಾಲವೂ ಇದೆ. ಇದರೊಂದಿಗೆ, ಅಗಣಿತ ತಳ್ಳು ಗಾಡಿಯ ವ್ಯಾಪಾರಿಗಳೂ ಹಗಲೂರಾತ್ರಿ ಬಿರಿಯಾನಿಯನ್ನು ಪೂರೈಸುತ್ತಿದ್ದು, ಈ ಜನಪ್ರಿಯ ಖಾದ್ಯದ ವ್ಯಾಪಕ ಲಭ್ಯತೆಗೆ ಕೊಡುಗೆ ನೀಡುತ್ತಿದ್ದಾರೆ.
ತಮಿಳುನಾಡಿನ ಬಿರಿಯಾನಿ ಮಾರುಕಟ್ಟೆ ಬಗ್ಗೆ ವ್ಯಾಪಕ ಸಂಶೋಧನೆ ನಡೆಸಿರುವ ಜೂನಿಯರ್ ಕುಪ್ಪಣ್ಣ ಸಂಸ್ಥೆಯ ಕಾರ್ಯಕಾರಿ ನಿರ್ದೇಶಕ ಬಾಲಚಂದರ್ ಆರ್. ಪ್ರಕಾರ, “ತಮಿಳುನಾಡಿನ ಪ್ರಾಥಮಿಕ ಬಿರಿಯಾನಿ ಪ್ರಾಂತ್ಯಗಳು ಕೊಯಂಬತ್ತೂರು ಭಾಗದ ಕೊಂಗು ಪ್ರಾಂತ್ಯ. ಹಾಗೆಯೇ ಅಂಬೂರ್ ಮತ್ತು ದಿಂಡಿಗಲ್ ಪ್ರಾಂತ್ಯಗಳು. ಕೆಲವು ಪ್ರಖ್ಯಾತ ಬಿರಿಯಾನಿ ಶೈಲಿಯ ಪೈಕಿ ಚೆನ್ನೈ ಮುಸ್ಲಿಂ ಬಿರಿಯಾನಿ (ಬಾಸ್ಮತಿ ಅಕ್ಕಿ), ಕೊಂಗು ಬಿರಿಯಾನಿ (ಸೀರಗ ಸಾಂಬಾ ಅಕ್ಕಿ), ಚೆಟ್ಟಿನಾಡ್ ಬಿರಿಯಾನಿ, ಅಂಬೂರ್ ಶೈಲಿ ಬಿರಿಯಾನಿ, ವಲ್ಲಜಾ ಶೈಲಿ ಬಿರಿಯಾನಿ ಹಾಗೂ ದಿಂಡಿಗಲ್ ಶೈಲಿ ಬಿರಿಯಾನಿ ಸೇರಿವೆ” ಎನ್ನುತ್ತಾರೆ. ಜೂನಿಯರ್ ಕುಪ್ಪಣ್ಣ ಸಂಸ್ಥೆ ಪ್ರತಿ ವರ್ಷ ಸುಮಾರು 1.2 ದಶಲಕ್ಷ ಬಿರಿಯಾನಿಯನ್ನು ಮಾರಾಟ ಮಾಡುತ್ತದೆ.
ತಮಿಳುನಾಡಿನ ಬಿರಿಯಾನಿ ಕ್ಷೇತ್ರದಲ್ಲಿನ ಅತಿ ದೊಡ್ಡ ಸಂಸ್ಥೆಗಳ ಪೈಕಿ ಒಂದಾಗಿರುವ ಪ್ರಸಿದ್ಧ ದಿಂಡಿಗಲ್ ತಲಪ್ಪಾಕ್ಕಟ್ಟಿ ಸಂಸ್ಥೆ ಪ್ರತಿ ನಿತ್ಯ ಸುಮಾರು 5,000 ಕೆಜಿಯಿಂದ 6,000 ಕೆಜಿಯಷ್ಟು ಬಿರಿಯಾನಿಯನ್ನು ಮಾರಾಟ ಮಾಡುತ್ತಿದೆ. ಹಬ್ಬದ ದಿನಗಳು ಹಾಗೂ ವಾರಾಂತ್ಯಗಳನ್ನು ಆಧರಿಸಿ ಈ ಸಂಖ್ಯೆ ವ್ಯತ್ಯಾಸಗೊಳ್ಳುತ್ತದೆ ಎಂದು ದಿಂಡಿಗಲ್ ತಲಪ್ಪಾಕ್ಕಟ್ಟಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸತೀಶ್ ಡಿ. ನಾಗಸ್ವಾಮಿ ಹೇಳುತ್ತಾರೆ. ಅಸಂಘಟಿತ ಬಿರಿಯಾನಿ ಮಾರುಕಟ್ಟೆಯು ವರ್ಷದಿಂದ ವರ್ಷಕ್ಕೆ ಬೆಳೆಯುತ್ತಲೇ ಇದೆ ಎಂಬುದರತ್ತಲೂ ಅವರು ಬೊಟ್ಟು ಮಾಡುತ್ತಾರೆ.
“ನಾನು ಗಾತ್ರದ ಬಗ್ಗೆ ತಲೆಕೆಡಿಸಿಕೊಂಡಿಲ್ಲ ; ಗುಣಮಟ್ಟಕ್ಕೇ ಹೆಚ್ಚು ಗಮನ ನೀಡುತ್ತೇನೆ. ನಾವು ಪ್ರತಿ ಎರಡು ಗಂಟೆಗೊಮ್ಮೆ ಬಿರಿಯಾನಿಯನ್ನು ಸಿದ್ಧಪಡಿಸಿ, ನಂತರ ಪೂರೈಸುತ್ತೇವೆ. ನಾವು ಬಿರಿಯಾನಿಯನ್ನು ಬೆಳಗ್ಗೆಯೇ ಸಿದ್ಧಪಡಿಸಿ, ಇಡೀ ದಿನ ಇಟ್ಟುಕೊಳ್ಳುವುದಿಲ್ಲ. ಪ್ರತಿ ನಿತ್ಯ 300 ಕೆಜಿಯಿಂದ 400 ಕೆಜಿಯಷ್ಟು ಬಿರಿಯಾನಿಯನ್ನು ತಯಾರಿಸುತ್ತೇವೆ” ಎಂದು ಮೌಂಟ್ ರೋಡ್ ನಲ್ಲಿರುವ ಬಿಲಾಲ್ ಸಂಸ್ಥೆಯ ಸಂಸ್ಥಾಪಕ ಅಬ್ದುಲ್ ರಹೀಂ ಹೇಳುತ್ತಾರೆ.
ಎರಡು ದಶಕಗಳ ಹಿಂದೆ ಸ್ಥಾಪನೆಯಾದ ತಾಜ್ ಕೊರಮಂಡಲ್ಸ್ ಗಿಲ್ಲಿ ಬಿರಿಯಾನಿ, ಚೆನ್ನೈನ ಬಿರಿಯಾನಿ ಪ್ರಿಯರ ಪಾಲಿಗೆ ಇಂದಿಗೂ ಅಚ್ಚುಮೆಚ್ಚಿನದಾಗಿ ಉಳಿದುಕೊಂಡು ಬಂದಿದೆ. “ಗಿಲ್ಲಿ ಬಿರಿಯಾನಿಯ ಬೇಡಿಕೆ ಗಮನಾರ್ಹ ಮತ್ತು ಅಧಿಕವಾಗಿದೆ. ವಿಶೇಷವಾಗಿ, ಚೆನ್ನೈನಲ್ಲಿನ ತಾಜ್ ಕೋರಮಂಡಲ್ ವಿಶಿಷ್ಟ ಸ್ವಾದದ ಕಾರಣಕ್ಕೆ ಪ್ರಸಿದ್ಧಿ ಪಡೆದಿದೆ. ನಾವು ಪ್ರತಿ ನಿತ್ಯ ಕುರಿ ಮಾಂಸ, ಕೋಳಿ ಮಾಂಸ ಹಾಗೂ ಸಸ್ಯಾಹಾರಿ ಆಯ್ಕೆಗಳೊಂದಿಗೆ ಮಾರಾಟ ಮಾಡುತ್ತೇವೆ” ಎನ್ನುತ್ತಾರೆ ತಾಜ್ ಕೋರಮಂಡಲ್ ನ ಹೋಟೆಲ್ ವ್ಯವಸ್ಥಾಪಕ ರೊನಾಲ್ಡ್ ಮೆನೆಝಸ್.
‘How Chennai Swiggy’d in 2024’ ಎಂಬ ಶೀರ್ಷಿಕೆ ಹೊಂದಿರುವ ಸ್ವಿಗ್ಗಿಯ ವರದಿ ಪ್ರಕಾರ, “ಚೆನ್ನೈ ನಗರವು 46.1 ಲಕ್ಷ ಚಿಕನ್ ಬಿರಿಯಾನಿಯನ್ನು ಸೇವಿಸಿದೆ! ಇದು ಬಿರಿಯಾನಿ ಪರ್ವತವನ್ನು ನಿರ್ಮಿಸಲು ಸಾಕಾಗುತ್ತದೆ. ಬಳಕೆದಾರರೊಬ್ಬರು ಕೇವಲ ಒಂದೇ ಆರ್ಡರ್ ನಲ್ಲಿ ಶೇ. 66ರಷ್ಟು ಬಿರಿಯಾನಿಗೆ ಬೇಡಿಕೆ ಇಡುವ ಮೂಲಕ ಈ ಬಿರಿಯಾನಿ ಪರ್ವತಕ್ಕೆ ಬುನಾದಿ ಹಾಕಿದ್ದಾರೆ” ಎಂದು ಜನವರಿ 1, 2024ರಿಂದ ನವೆಂಬರ್ 22, 2024ರ ವರೆಗಿನ ದತ್ತಾಂಶಗಳ ಸಂಗ್ರಹದ ಆಧಾರದಲ್ಲಿ ಹೇಳಲಾಗಿದೆ.
ಬಿರಿಯಾನಿ ಬೇಡಿಕೆಗೆ ಹೆಚ್ಚುತ್ತಿರುವ ಬೇಡಿಕೆಯ ಹಿನ್ನೆಲೆಯಲ್ಲಿ, ನವೋದ್ಯಮಗಳು ಹಾಗೂ ಮಸಾಲೆ ಬ್ರ್ಯಾಂಡ್ ಗಳೂ ಏರುಗತಿಯಲ್ಲಿರುವ ಮಾರುಕಟ್ಟೆ ಅವಕಾಶದ ಲಾಭವನ್ನು ಕೈವಶ ಮಾಡಿಕೊಳ್ಳಲು ಮುಂದಾಗಿವೆ. ಚೆನ್ನೈ ಮೂಲದ ನವೋದ್ಯಮವಾದ ಕೂಕ್ಡ್, ಪ್ರತಿ ತಿಂಗಳು ಸುಮಾರು 30,000ದಷ್ಟು ಬಿರಿಯಾನಿ ಪೊಟ್ಟಣಗಳನ್ನು ಮಾರಾಟ ಮಾಡುತ್ತಿದೆ. ಇದರಿಂದ ಪ್ರತಿ ತಿಂಗಳು ಒಂದು ಲಕ್ಷ ಜನರಿಗೆ ಬಿರಿಯಾನಿ ತಯಾರಿಸಲು ನೆರವಾಗುತ್ತಿದೆ. “ನಾವು ಜನರು ಬಹುತೇಕ ಎಲ್ಲ ವಾರ ಬಳಸುವಂತಹ ಉತ್ಪನ್ನವನ್ನು ತಯಾರಿಸಲು ಬಯಸಿದ್ದೆವು. ಹಲವಾರು ಮನೆಗಳಲ್ಲಿ ಬಿರಿಯಾನಿ ಪ್ರತಿವಾರದ ಪದ್ಧತಿಯಾಗಿದೆ. ನಮಗೆ ಬಿರಿಯಾನಿ ಪೊಟ್ಟಣಗಳನ್ನು ತಯಾರಿಸಲು ಇದೇ ಸ್ಫೂರ್ತಿಯಾಯಿತು” ಎಂದು ಕುಕ್ಡ್ ಸಂಸ್ಥೆಯ ಸಂಸ್ಥಾಪಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆತಿಥಿಯನ್ ಹೇಳುತ್ತಾರೆ.
ಮುಂದಿನ ವರ್ಷ ಐದು ವಿಭಿನ್ನ ಬಿರಿಯಾನಿ ಮಸಾಲೆ ಪೊಟ್ಟಣಗಳನ್ನು ಪರಿಚಯಿಸಲು ನಾವು ಕೆಲಸ ಮಾಡುತ್ತಿದ್ದೇವೆ ಎಂದು ತಮಿಳುನಾಡಿನಲ್ಲಿನ ಜನಪ್ರಿಯ ಮಸಾಲೆ ಬ್ರ್ಯಾಂಡ್ ಸಂಸ್ಥಾಪಕರೊಬ್ಬರು ಹೇಳುತ್ತಾರೆ. “ಈ ಕುರಿತು ಸಂಶೋಧನೆ ಮತ್ತು ಅಭಿವೃದ್ಧಿ ಕೆಲಸ ಪ್ರಗತಿಯಲ್ಲಿದೆ” ಎಂದೂ ಅವರು ಹೇಳುತ್ತಾರೆ. ಸಾಧಾರಣ ರಸ್ತೆ ಬದಿ ಮಳಿಗೆಗಳಲ್ಲಿ ಅಥವಾ ನಾಜೂಕು ರೆಸ್ಟೋರೆಂಟ್ ಗಳಲ್ಲಿ ಬಿರಿಯಾನಿಯನ್ನು ಆಸ್ವಾದಿಸಿದರೂ, ತಮಿಳುನಾಡು ಜನರ ಪಾಲಿಗೆ ಬಿರಿಯಾನಿ ಕೇವಲ ಊಟವಲ್ಲ; ಬದಲಿಗೆ ಒಂದು ಅನುಭವ!
ಸೌಜನ್ಯ: thehindu.com