ಬಿಷ್ಣೋಯಿಯನ್ನು ಕೊಲ್ಲುವ ಕೈದಿಗಳಿಗೂ 1.11 ಕೋಟಿ ರೂ. ಬಹುಮಾನ | ಕರ್ಣಿ ಸೇನೆ ಘೋಷಣೆ
ಲಾರೆನ್ಸ್ ಬಿಷ್ಣೋಯಿ | PTI
ಮುಂಬೈ: ಭೂಗತ ಪಾತಕಿ ಲಾರೆನ್ಸ್ ಬಿಷ್ಣೋಯಿಯನ್ನು ಕೊಂದವರಿಗೆ ನೀಡಲಾಗುವ ಬಹುಮಾನದ ವ್ಯಾಪ್ತಿಯನ್ನು ಕ್ಷತ್ರಿಯ ಕರ್ಣಿ ಸೇನೆಯ ಮುಖ್ಯಸ್ಥ ರಾಜ್ ಶೇಖಾವತ್ ವಿಸ್ತರಿಸಿದ್ದಾರೆ. ಬಿಷ್ಣೋಯಿಯನ್ನು ಜೈಲಿನ ಕೈದಿಗಳು ಕೊಂದರೆ ಅವರಿಗೂ 1,11,11,111 (ಒಂದು ಕೋಟಿ ಹನ್ನೊಂದು ಲಕ್ಷ ಹನ್ನೊಂದು ಸಾವಿರದ ನೂರ ಹನ್ನೊಂದು) ರೂಪಾಯಿ ಬಹುಮಾನ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.
ಇದಕ್ಕೂ ಮೊದಲು, ಎನ್ಕೌಂಟರ್ ನಲ್ಲಿ ಬಿಷ್ಣೋಯಿಯನ್ನು ಕೊಲ್ಲುವ ಪೊಲೀಸ್ ಅಧಿಕಾರಿಗಳಿಗೆ ಈ ಮೊತ್ತವನ್ನು ನೀಡುವುದಾಗಿ ಕರ್ಣಿ ಸೇನೆ ಘೋಷಿಸಿತ್ತು.
ಗ್ಯಾಂಗ್ ಸ್ಟರ್ ಕೊಲೆಗೆ ಬಹುಮಾನ ಘೋಷಿಸಿರುವುದನ್ನು ಸುದ್ದಿ ಚಾನೆಲೊಂದು ಟೀಕಿಸಿರುವುದಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ಹೇಳಿಕೆಯೊಂದರ ಮೂಲಕ ಪ್ರತಿಕ್ರಿಯಿಸಿರುವ ರಾಜ್ ಶೇಖಾವತ್, ಕರ್ಣಿ ಸೇನೆಯ ಘೋಷಣೆಯನ್ನು ಸಮರ್ಥಿಸಿಕೊಂಡರು. ಭೂಗತ ಪಾತಕಿಯನ್ನು ಕೊಲ್ಲುವ ಪೊಲೀಸ್ ಅಧಿಕಾರಿಗಳಿಗೆ ಬಹುಮಾನ ನೀಡುವುದಾಗಿ ಅವರು ಪುನರುಚ್ಛರಿಸಿದರು. ಅಷ್ಟೇ ಅಲ್ಲದೆ, ಜೈಲು ಆವರಣದಲ್ಲಿ ಬಿಷ್ಣೋಯಿಯನ್ನು ಕೊಲ್ಲುವ ಯಾವುದೇ ಕೈದಿಗೆ ಇಷ್ಟೇ ಮೊತ್ತದ ಬಹುಮಾನ ನೀಡುವುದಾಗಿ ಪ್ರಕಟಿಸಿದರು.
ಲಾರೆನ್ಸ್ ಬಿಷ್ಣೋಯಿ ಪ್ರಸಕ್ತ ಅಹ್ಮದಾಬಾದ್ನ ಸಾಬರ್ಮತಿ ಕೇಂದ್ರೀಯ ಕಾರಾಗೃಹದಲ್ಲಿ ಇದ್ದಾನೆ.