ಲಾರೆನ್ಸ್ ಬಿಷ್ಣೋಯಿ ಸಹೋದರ ಅನ್ಮೋಲ್ ಬಿಷ್ಣೋಯಿಯಿಂದ ಬಾಬಾ ಸಿದ್ದೀಕಿ ಹತ್ಯೆಯ ಸಂಚು: ಮುಂಬೈ ಕ್ರೈಂ ಬ್ರ್ಯಾಂಚ್
ಕೆನಾಡಾದಿಂದಲೇ ಹತ್ಯೆಗೆ ಸಂಚು ರೂಪಿಸಿದ್ದ ಆರೋಪಿ
ಅನ್ಮೋಲ್ ಬಿಷ್ಣೋಯಿ
ಮುಂಬೈ: ಮಾಜಿ ಸಚಿವ ಹಾಗೂ ಎನ್ಸಿಪಿ ನಾಯಕ ಬಾಬಾ ಸಿದ್ದೀಕಿ ಹತ್ಯೆಯ ಸಂಚನ್ನು ಸದ್ಯ ಜೈಲಿನಲ್ಲಿರುವ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯಿ ಸಹೋದರ ಅನ್ಮೋಲ್ ಬಿಷ್ಣೋಯಿ ಕೆನಡಾದಿಂದ ನಡೆಸಿದ್ದಾನೆ ಎಂದು ಶನಿವಾರ ಮುಂಬೈ ಅಪರಾಧ ವಿಭಾಗದ ಪೊಲೀಸರು ತಿಳಿಸಿದ್ದಾರೆ.
ಇಬ್ಬರು ಆರೋಪಿಗಳಾದ ರಾಮ್ ಫೂಲ್ ಕನೋಜಿಯ ಹಾಗೂ ನಿತಿನ್ ಸಪ್ರೆಯನ್ನು ವಿಚಾರಣೆಗೊಳಪಡಿಸಿದಾಗ ಈ ಸಂಗತಿ ಬಯಲಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ. ಮತ್ತೊಬ್ಬ ಆರೋಪಿ ಸುಜಿತ್ ಸುಶೀಲ್ ಸಿಂಗ್ ಅಲಿಯಾಸ್ ಡಬ್ಬು ಮೂಲಕ ಅನ್ಮೋಲ್ ಬಿಷ್ಣೋಯಿ ಈ ದಾಳಿಯನ್ನು ನಡೆಸಿದ್ದಾನೆ ಎಂದೂ ಅವರು ತಿಳಿಸಿದ್ದಾರೆ.
ಡಬ್ಬು ದಾಳಿಕೋರರಿಗೆ ರಾಜಸ್ಥಾನದಿಂದ ಆಯುಧಗಳು ಹಾಗೂ ಹಣಕಾಸು ನೆರವನ್ನು ಒದಗಿಸಿದ್ದಾನೆ. ಬಾಬಾ ಸಿದ್ದೀಕಿಯನ್ನು ಹತ್ಯೆಗೈಯ್ಯುವುದಕ್ಕೂ ಮುನ್ನ, ಅವರ ನಿವಾಸ ಮತ್ತು ಸುತ್ತಮುತ್ತಲಿನ ಚಲನವಲನಗಳನ್ನು ಗಮನಿಸುವಂತೆ ಒಂದು ತಿಂಗಳ ಹಿಂದೆಯೇ ಶೂಟರ್ ಗಳಿಗೆ ಡಬ್ಬು ಸೂಚಿಸಿದ್ದ ಎಂದು ಮೂಲಗಳು ತಿಳಿಸಿವೆ ಎಂದು TOI ಸುದ್ದಿ ಸಂಸ್ಥೆ ವರದಿ ಮಾಡಿದೆ. ಸುಜಿತ್ ನಿಂದ ಐದನೆ ಆಯುಧವನ್ನು ವಶಪಡಿಸಿಕೊಳ್ಳಲಾಗಿದೆ ಎಂದೂ ಪೊಲೀಸರು ಹೇಳಿದ್ದಾರೆ.
ಬಾಬಾ ಸಿದ್ದೀಕಿಯನ್ನು ಹತ್ಯೆಗೈಯ್ಯಲು ಅವರ ಹಾಗೂ ಅವರ ಪುತ್ರ ಝೀಶನ್ ಸಿದ್ದೀಕಿಯವರ ಭಾವಚಿತ್ರಗಳನ್ನು ಸ್ನ್ಯಾಪ್ ಚಾಟ್ ಮೂಲಕ ಅನ್ಮೋಲ್ ಬಿಷ್ಣೋಯಿ ಶೂಟರ್ ಗಳೊಂದಿಗೆ ಹಂಚಿಕೊಂಡಿದ್ದಾನೆ ಎಂದು ಶಂಕಿಸಲಾಗಿದೆ. ಅನ್ಮೋಲ್ ವಿರುದ್ಧ 18 ಪ್ರಕರಣಗಳು ಬಾಕಿಯಿದ್ದು, ಆತ ಕೆನಡಾದಲ್ಲಿ ತಲೆಮರೆಸಿಕೊಂಡಿದ್ದಾನೆ.
ಕೆಲ ತಿಂಗಳ ಹಿಂದೆ ಬಾಲಿವುಡ್ ನಟ ಸಲ್ಮಾನ್ ಖಾನ್ ನಿವಾಸದ ಮೇಲೆ ನಡೆದಿದ್ದ ಗುಂಡಿನ ದಾಳಿಯ ಹೊಣೆಯನ್ನೂ ಎಪ್ರಿಲ್ ತಿಂಗಳ ಫೇಸ್ ಬುಕ್ ಪೋಸ್ಟ್ ಒಂದರಲ್ಲಿ ಅನ್ಮೋಲ್ ಬಿಷ್ಣೋಯಿ ಹೊತ್ತುಕೊಂಡಿದ್ದ.