ಬಿಜೆಪಿ ರೈತರ ಅತ್ಯಂತ ದೊಡ್ಡ ಶತ್ರು : ಖರ್ಗೆ
ಮಲ್ಲಿಕಾರ್ಜುನ ಖರ್ಗೆ | PC : PTI
ಹೊಸದಿಲ್ಲಿ : ಬಿಜೆಪಿ ಮಹಾರಾಷ್ಟ್ರದ ರೈತರ ಅತ್ಯಂತ ದೊಡ್ಡ ಶತ್ರುವಾಗಿದೆ ಎಂದು ಸೋಮವಾರ ಹೇಳಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು, ಡಬಲ್ ಇಂಜಿನ್ ಸರಕಾರವನ್ನು ಅಧಿಕಾರದಿಂದ ಕಿತ್ತೊಗೆದರೆ ಮಾತ್ರ ರೈತರಿಗೆ ಲಾಭವಾಗಲಿದೆ ಎಂದು ರಾಜ್ಯವು ನಿರ್ಧರಿಸಿದೆ ಎಂದು ಪ್ರತಿಪಾದಿಸಿದ್ದಾರೆ.
ಎಕ್ಸ್ ಪೋಸ್ಟ್ನಲ್ಲಿ ಮಹಾರಾಷ್ಟ್ರದಲ್ಲಿ ರೈತರ ಆತ್ಮಹತ್ಯೆಗಳಿಗಾಗಿ ಬಿಜೆಪಿಯನ್ನು ತರಾಟೆಗೆತ್ತಿಕೊಂಡಿರುವ ಖರ್ಗೆ, ರಾಜ್ಯವನ್ನು ಬರಮುಕ್ತಗೊಳಿಸುವ ಅದರ ಭರವಸೆಯನ್ನು ‘ಜುಮ್ಲಾ(ಒಣಮಾತು)’ ಎಂದು ಬಣ್ಣಿಸಿದ್ದಾರೆ.
ಮಹಾರಾಷ್ಟ್ರದಲ್ಲಿ 20,000 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೃಷಿ ಕ್ಷೇತ್ರಕ್ಕೆ ಹಣಕಾಸಿನಲ್ಲಿ ಭಾರೀ ಕಡಿತ ಮಾಡಲಾಗಿದೆ. 20,000 ಕೋ.ರೂ.ವೆಚ್ಚದಲ್ಲಿ ವಾಟರ್ ಗ್ರಿಡ್ ನಿರ್ಮಾಣದ ಭರವಸೆ ಹುಸಿಯಾಗಿದೆ ಎಂದು ಅವರು ಹೇಳಿದ್ದಾರೆ.
ವಿಮೆ ಕಂಪನಿಗಳಿಗೆ 8,000 ಕೋ.ರೂ.ಗಳನ್ನು ನೀಡಲಾಗುತ್ತಿದೆ. ಆದರೆ ರೈತರಿಗೆ ಪರಿಹಾರ ನೀಡಲು ನಿರಾಕರಿಸುತ್ತಿರುವುದಕ್ಕಾಗಿ ಬಿಜೆಪಿ ವಿರುದ್ಧವೂ ಖರ್ಗೆ ದಾಳಿ ನಡೆಸಿದರು.