ನುಸುಳುಕೋರರನ್ನು ಓಡಿಸಲು ಎಲ್ಲರೂ ಎನ್ಆರ್ಸಿ ಬೆಂಬಲಿಸಬೇಕು: ಬಿಜೆಪಿ

ಸಾಂದರ್ಭಿಕ ಚಿತ್ರ | PC : PTI
ಕೋಲ್ಕತಾ : ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್ಸಿ)ಯನ್ನು ಜಾರಿಗೊಳಿಸಬೇಕು ಹಾಗೂ ಒಳನುಸುಳುವಿಕೆ ಮತ್ತು ‘‘ಅಜ್ಞಾತ’’ ಮತದಾರರು ಮುಂತಾದ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸುವುದಕ್ಕಾಗಿ ಎಲ್ಲಾ ರಾಜಕೀಯ ಪಕ್ಷಗಳು ಅದರ ಅನುಷ್ಠಾನಕ್ಕೆ ಬೆಂಬಲ ನೀಡಬೇಕು ಎಂದು ರಾಜ್ಯ ವಿಧಾನಸಭೆಯ ಪ್ರತಿಪಕ್ಷ ನಾಯಕ ಸುವೇಂದು ಅಧಿಕಾರಿ ರವಿವಾರ ಹೇಳಿದ್ದಾರೆ.
‘‘ಎಲ್ಲಾ ರಾಜಕೀಯ ಪಕ್ಷಗಳು ಎನ್ಆರ್ಸಿಗೆ ಬೆಂಬಲ ನೀಡಬೇಕು. 2026ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ, ಪಶ್ಚಿಮ ಬಂಗಾಳದಲ್ಲಿ ನಾವು ಎನ್ಆರ್ಸಿಯನ್ನು ಜಾರಿಗೊಳಿಸುತ್ತೇವೆ’’ ಎಂದು ಅವರು ಹೇಳಿದರು.
ಬಿಜೆಪಿ ಆಡಳಿತದ ರಾಜ್ಯಗಳು ಎನ್ಆರ್ಸಿ ಅನುಷ್ಠಾನದ ಪರವಾಗಿವೆ ಎಂದು ಹೇಳಿದ ಅವರು, ಪಶ್ಚಿಮ ಬಂಗಾಳದಲ್ಲಿ ಅದರ ಅನುಷ್ಠಾನಕ್ಕೆ ತೃಣಮೂಲ ಕಾಂಗ್ರೆಸ್ (ಟಿಎಮ್ಸಿ) ನಿರಾಕರಿಸಿರುವುದು, ಒಳನುಸುಳುವಿಕೆಯನ್ನು ತಡೆಯುವಲ್ಲಿನ ಅದರ ಕಾಳಜಿಯ ಕೊರತೆಯನ್ನು ತೋರಿಸುತ್ತದೆ ಎಂದು ಅಭಿಪ್ರಾಯಪಟ್ಟರು. ‘‘ಉತ್ತರಾಖಂಡ ಮತ್ತು ಗುಜರಾತ್ ಮುಂತಾದ ರಾಜ್ಯಗಳು ಎನ್ಆರ್ಸಿಯನ್ನು ಜಾರಿಗೊಳಿಸುತ್ತಿವೆ. ಮಹಾರಾಷ್ಟ್ರ ಅದನ್ನು ಆರಂಭಿಸಿದೆ. ಎನ್ಡಿಎ ಆಡಳಿತದ ರಾಜ್ಯಗಳಲ್ಲಿ ಎನ್ಆರ್ಸಿ ಪ್ರಕ್ರಿಯೆ ಚಾಲ್ತಿಯಲ್ಲಿದೆ’’ ಎಂದು ಕೋಲ್ಕತದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ನಾಯಕ ಹೇಳಿದರು.
ಎನ್ಆರ್ಸಿ ಅನುಷ್ಠಾನವು ‘‘ನುಸುಳುಕೋರರನ್ನು’’ ಹೊರದಬ್ಬುವ ಏಕೈಕ ವಿಧಾನವಾಗಿದೆ ಎಂದು ಅವರು ಹೇಳಿದರು. ಪಶ್ಚಿಮ ಬಂಗಾಳದಲ್ಲಿ ಇತರ ದೇಶಗಳಿಂದ ನುಸುಳಿ ಬಂದಿರುವ ಅಕ್ರಮ ಮತದಾರರಿದ್ದಾರೆ ಎಂದು ಅವರು ಆರೋಪಿಸಿದರು.
►ಬಿಜೆಪಿಯು ಧರ್ಮದ ಆಧಾರದಲ್ಲಿ ಜನರನ್ನು ಒಡೆಯಬಾರದು: ಟಿಎಮ್ಸಿ
ಬಿಜೆಪಿ ನಾಯಕ ಸುವೇಂದು ಅಧಿಕಾರಿಯ ಆರೋಪಗಳಿಗೆ ಪ್ರತಿಕ್ರಿಯಿಸಿದ ಟಿಎಮ್ಸಿ ವಕ್ತಾರ ಕುನಾಲ್ ಘೋಷ್, ‘‘ಸಮಾಜದ ಮೇಲೆ ಋಣಾತ್ಮಕ ಪರಿಣಾಮವನ್ನು ಬೀರುವ ಯಾವುದೇ ಕೆಲಸವನ್ನು ಅವರು (ಬಿಜೆಪಿ) ಮಾಡಬಾರದು’’ ಎಂದು ಹೇಳಿದರು.
‘‘ಜನರಿಗೆ ‘ರೋಟಿ, ಕಪಡಾ ಔರ್ ಮಕಾನ್’ (ಆಹಾರ, ಬಟ್ಟೆ ಮತ್ತು ವಸತಿ) ನೀಡುವ ಕೆಲಸವನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ನಮ್ಮ ಪಕ್ಷ ಮಾಡಿಕೊಂಡು ಬರುತ್ತಿದೆ. ಈ ವಿಷಯದಲ್ಲಿ ಬಿಜೆಪಿಗೆ ನಮ್ಮೊಂದಿಗೆ ಸ್ಪರ್ಧಿಸಲು ಸಾಧ್ಯವಾಗುತ್ತಿಲ್ಲ ಮತ್ತು ಅವರು ಪಶ್ಚಿಮ ಬಂಗಾಳದ ಶತ್ರುಗಳಾಗಿದ್ದಾರೆ. ಹಾಗಾಗಿ, ಅವರು ಧರ್ಮಗಳ ಆಧಾರದಲ್ಲಿ ಜನರನ್ನು ವಿಭಜಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಜನರು ಇದನ್ನು ತಿರಸ್ಕರಿಸಿದ್ದಾರೆ’’ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಘೋಷ್ ಹೇಳಿದರು.
ಇತ್ತೀಚೆಗೆ, ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಯನ್ನು ತಿರುಚುವ ಕೆಲಸವನ್ನು ಬಿಜೆಪಿ ಮಾಡಬಹುದು ಎಂಬ ಆತಂಕವನ್ನು ಮಮತಾ ಬ್ಯಾನರ್ಜಿ ವ್ಯಕ್ತಪಡಿಸಿದ್ದರು. ಬಿಜೆಪಿಯು ತನ್ನ ದಿಲ್ಲಿ ಮಾದರಿಯನ್ನು ಪಶ್ಚಿಮ ಬಂಗಾಳದಲ್ಲೂ ಅನುಸರಿಸಿ ಚುನಾವಣಾ ಲಾಭಕ್ಕಾಗಿ ಮತದಾರರ ಪಟ್ಟಿಯಲ್ಲಿ ಹಸ್ತಕ್ಷೇಪ ಮಾಡಬಹುದು ಎಂದು ಅವರು ಹೇಳಿದ್ದರು.