ಬಿಜೆಪಿ ಶಿವಾಜಿಗಿಂತ ಔರಂಗಜೇಬ್ ಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದೆ: ಉದ್ಧವ್ ಠಾಕ್ರೆ ಬಣ

ಉದ್ಧವ್ ಠಾಕ್ರೆ (PTI)
ಮುಂಬೈ: ಔರಂಗಜೇಬ್ ಸಮಾಧಿಯನ್ನು ತೆರವುಗೊಳಿಸುವ ಬೇಡಿಕೆ ಹೆಚ್ಚುತ್ತಿರುವ ನಡುವೆ ಬುಧವಾರ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿರುವ ಪ್ರತಿಪಕ್ಷ ಶಿವಸೇನೆ (ಯುಬಿಟಿ), ಆಡಳಿತಾರೂಢ ಪಕ್ಷ ಛತ್ರಪತಿ ಶಿವಾಜಿ ಮಹಾರಾಜರಿಗಿಂತ ಮೊಗಲ್ ದೊರೆ ಔರಂಗಜೇಬ್ ಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದೆ ಎಂದಿದೆ.
ಗಲಭೆಯನ್ನು ತಡೆಯಲು ಹಾಗೂ ಮತಾಂಧರನ್ನು ಶಾಂತಗೊಳಿಸಲು ಛತ್ರಪತಿ ಕೇಂದ್ರ ಸರಕಾರ ಸಂಭಾಜಿನಗರದಲ್ಲಿರುವ ಔರಂಗಬಾದ್ ಸಮಾಧಿಯ ಸಂರಕ್ಷಿತ ಸ್ಮಾರಕ ಟ್ಯಾಗ್ ಅನ್ನು ತೆಗೆದು ಹಾಕಬೇಕು ಎಂದು ಅದು ಹೇಳಿದೆ.
ಪಕ್ಷದ ಮುಖವಾಣಿಯಾದ ‘ಸಾಮ್ನಾ’ದ ಸಂಪಾದಕೀಯದಲ್ಲಿ ಶಿವಸೇನೆ (ಯುಬಿಟಿ), ‘‘ಛಾವಾ’’ ಚಲನಚಿತ್ರದ ಬಳಿಕ ಆರೆಸ್ಸೆಸ್, ಬಜರಂಗದಳ ಹಾಗೂ ವಿಶ್ವಹಿಂದೂ ಪರಿಷದ್ ಹಾಗೂ ಬಿಜೆಪಿಯ ನವ ಹಿಂದುತ್ವವಾದಿಗಳು ಔರಂಗಜೇಬ್ನ ಸಮಾಧಿ ಕುರಿತು ಧ್ವನಿ ಎತ್ತಿದ್ದಾರೆ ಹಾಗೂ ಮಹಾರಾಷ್ಟ್ರದಲ್ಲಿ ಶಾಂತಿ ಕದಡುತ್ತಿದ್ದಾರೆ ಎಂದಿದೆ.
ಪ್ರಸ್ತುತ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನಾವಿಸ್ ಪ್ರತಿಯೊಬ್ಬರನ್ನು ಜೊತೆಗೆ ಕರೆದುಕೊಂಡು ಹೋಗುವ ನೀತಿಯನ್ನು ಅನುಸರಿಸುತ್ತಿದ್ದ ಶಿವಾಜಿ ಮಹಾರಾಜರಿಗಿಂತ ಔರಂಗಜೇಬ್ ಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದೆ. ಆದರೆ, ಶಿವಾಜಿ ಮಹಾರಾಜರ ಈ ನೀತಿ ಬಿಜೆಪಿಗೆ ಈ ಹಿಂದೆ ಸ್ವೀಕಾರಾರ್ಹವಾಗಿರಲಿಲ್ಲ. ಇಂದು ಕೂಡ ಸ್ವೀಕಾರಾರ್ಹವಾಗಿಲ್ಲ ಎಂದು ಉದ್ಧವ್ ಠಾಕ್ರೆ ನೇತೃತ್ವದ ಪಕ್ಷ ಹೇಳಿದೆ.
ಔರಂಗಜೇಬ್ನ ಸಮಾಧಿ ಕುರಿತು ವಿವಾದ ಸೃಷ್ಟಿಸುವ ಅಗತ್ಯತೆ ಇಲ್ಲ. ಅವರು (ಔರಂಗಜೇಬ್) ಸಮಾಧಿಯ ಒಳಗಿದ್ದಾರೆ. ಅವರು ಅದರಿಂದ ಹೊರಗೆ ಬರಲಾರರು ಎಂದು ಸಂಪಾದಕೀಯ ಹೇಳಿದೆ.
ಇದು ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಸಂರಕ್ಷಿತ ಸ್ಮಾರಕ ಆದ ಬಳಿಕ ಛತ್ರಪತಿ ಸಂಭಾಜಿನಗರ್ (ಈ ಹಿಂದೆ ಇದು ಔರಂಗಾಬಾದ್ ಎಂದು ಜನಪ್ರಿಯವಾಗಿತ್ತು) ನಲ್ಲಿರುವ ಔರಂಗಜೇಬ್ ಸಮಾಧಿಗೆ ರಾಜ್ಯ ಮೀಸಲು ಪೊಲೀಸ್ ಪಡೆ (ಎಸ್ಪಿಆರ್ಎಫ್) ಪ್ರಸ್ತುತ ರಕ್ಷಣೆ ನೀಡುತ್ತಿದೆ ಎಂದು ಅದು ತಿಳಿಸಿದೆ.
‘‘ಕೇಂದ್ರ ಸರಕಾರ ಸಮಾಧಿಗೆ ನೀಡಿದ ಸಂರಕ್ಷಣೆ ಹಾಗೂ ಸಂರಕ್ಷಿತ ಸ್ಮಾರಕ ಟ್ಯಾಗ್ ಅನ್ನು ಹಿಂಪಡೆಯಬೇಕು. ಇದರಿಂದ ಈ ಭೂಮಿ ಮುಕ್ತವಾಗುತ್ತದೆ. ಅಲ್ಲದೆ, ಉದ್ವಿಗ್ನತೆಗೆ ಯಾವುದೇ ಅವಕಾಶ ಇರಲಾರದು’’ ಎಂದು ಶಿವಸೇನೆ (ಯುಬಿಟಿ) ಹೇಳಿದೆ.