ದಿಲ್ಲಿ ಮುಖ್ಯಮಂತ್ರಿ ಹುದ್ದೆಗೆ ಬಿಜೆಪಿಯಿಂದ ʼಅಚ್ಚರಿʼಯ ಆಯ್ಕೆ?

Photo credit: PTI
ಹೊಸದಿಲ್ಲಿ : ದಿಲ್ಲಿ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ಬಹುಮತ ಪಡೆದು 27 ವರ್ಷಗಳ ಬಳಿಕ ಬಿಜೆಪಿ ಸರಕಾರ ರಚನೆಗೆ ಮುಂದಾಗಿದೆ. ದಿಲ್ಲಿಯ ಮುಂದಿನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಬಗ್ಗೆ ಬಿಜೆಪಿ ಈವರೆಗೆ ಯಾವುದೇ ಸುಳಿವು ಬಿಟ್ಟುಕೊಟ್ಟಿಲ್ಲ. ದಿಲ್ಲಿಯ ಕೆಲ ಶಾಸಕರ, ಸಂಸದರ ಹೆಸರು ದಿಲ್ಲಿ ಸಿಎಂ ಹುದ್ದೆಗೆ ಮುಂಚೂಣಿಯಲ್ಲಿದೆ. ಆದರೆ, ಈ ಎಲ್ಲಾ ಲೆಕ್ಕಾಚಾರಗಳನ್ನು ತಲೆ ಕೆಳಗೆ ಮಾಡಿ ಬಿಜೆಪಿ ವರಿಷ್ಠರು ಹೊಸ ಮುಖವನ್ನು ಘೋಷಣೆ ಮಾಡಿದರೂ ಅಚ್ಚರಿಯಿಲ್ಲ.
ದಿಲ್ಲಿ ಸಿಎಂ ಹುದ್ದೆಗೆ ಮಾಜಿ ಸಿಎಂ ಅರವಿಂದ ಕೇಜ್ರಿವಾಲ್ ಅವರನ್ನು ಸೋಲಿಸಿದ ಪರ್ವೇಶ್ ವರ್ಮಾ, ಸಂಸದೆ ಬಾನ್ಸುರಿ ಸ್ವರಾಜ್, ವಿಜಯೇಂದ್ರ ಗುಪ್ತಾ, ಮನೋಜ್ ತಿವಾರಿ ಸೇರಿ ಪ್ರಮುಖ ಬಿಜೆಪಿ ನಾಯಕರ ಹೆಸರುಗಳು ಮುಂಚೂಣಿಯಲ್ಲಿದೆ.
ದಿಲ್ಲಿ ಮುಖ್ಯಮಂತ್ರಿ ಆಯ್ಕೆ ಕುರಿತು ಪ್ರಧಾನಿ ನರೇಂದ್ರ ಮೋದಿ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಜೊತೆಗೆ ರವಿವಾರ ಸಮಾಲೋಚನೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ದಿಲ್ಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್ ದೇವ ಮಾತನಾಡಿ, ಪಕ್ಷದ ಕೇಂದ್ರ ನಾಯಕರು ಶೀಘ್ರದಲ್ಲೇ ಮುಖ್ಯಮಂತ್ರಿ ಹೆಸರನ್ನು ಘೋಷಿಸಲಿದ್ದಾರೆ ಎಂದು ಹೇಳಿದ್ದಾರೆ.
ಈ ಹಿಂದೆ ಮಧ್ಯಪ್ರದೇಶ, ರಾಜಸ್ಥಾನ, ಒಡಿಶಾ ವಿಧಾನಸಭೆ ಚುನಾವಣೆ ಫಲಿತಾಂಶದ ಬಳಿಕ ಆಯಾ ರಾಜ್ಯಗಳ ಘಟಾನುಘಟಿ ನಾಯಕರ ಹೆಸರುಗಳು ಸಿಎಂ ಹುದ್ದೆಗೆ ಮುಂಚೂಣಿಯಲ್ಲಿದ್ದವು. ಆದರೆ ಬಿಜೆಪಿ ವರಿಷ್ಠರು ಮುಖ್ಯಮಂತ್ರಿ ಹುದ್ದೆಗೆ ತಮ್ಮದೇ ಆಯ್ಕೆಯ ಹೆಸರು ಘೋಷಿಸಿ ಅಚ್ಚರಿ ಮೂಡಿಸಿದ್ದರು. ಜಾತಿ ಲೆಕ್ಕಾಚಾರ, ವಿಭಿನ್ನ ಆಯಾಮಗಳಲ್ಲಿ ಅಳೆದು ತೂಗಿದ ಬಳಿಕ ಹೊಸ ಮುಖಗಳನ್ನು ಮುಖ್ಯಮಂತ್ರಿ ಹುದ್ದೆಗೆ ಬಿಜೆಪಿ ಹೈಕಮಾಂಡ್ ಘೋಷಿಸಿತ್ತು. ದಿಲ್ಲಿಯಲ್ಲೂ ಇದೇ ರೀತಿಯ ಅಚ್ಚರಿಯ ಅಭ್ಯರ್ಥಿಯನ್ನು ಬಿಜೆಪಿ ಘೋಷಿಸುವ ಸಾಧ್ಯತೆ ಇದೆ.