ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮಹಿಳೆಗೆ ಚುಂಬಿಸಿ ವಿವಾದ ಸೃಷ್ಟಿಸಿದ ಬಿಜೆಪಿ ಅಭ್ಯರ್ಥಿ; ಇದೇನಾ ʼನಾರಿ ಸಮ್ಮಾನ್ʼ ಎಂದು ಪ್ರಶ್ನಿಸಿದ ಟಿಎಂಸಿ
Photo:X
ಕೋಲ್ಕತ್ತಾ (ಪಶ್ಚಿಮ ಬಂಗಾಳ): ಮಾಲ್ಡಾ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಖಾಗೆನ್ ಮುರ್ಮು ಅವರು ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮಹಿಳೆಯೊಬ್ಬರ ಕೆನ್ನೆಗೆ ಚುಂಬಿಸುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ಟಿಎಂಸಿ ಆರೋಪಿಸಿದೆ. ಬುಧವಾರ ಈ ಘಟನೆಯ ಫೋಟೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದಂತೆಯೆ ವಿವಾದ ಸೃಷ್ಟಿಯಾಗಿದೆ.
ಈ ಘಟನೆಯು ಪಶ್ಚಿಮ ಬಂಗಾಳದ ಚಂಚಲ್ ನ ಶ್ರಿಹಿಪುರ್ ಗ್ರಾಮದಲ್ಲಿ ಸೋಮವಾರ ಮುರ್ಮು ಚುನಾವಣಾ ಪ್ರಚಾರ ನಡೆಸುವಾಗ ನಡೆದಿದೆ. ಮುರ್ಮು ಅವರ ಚುನಾವಣಾ ಪ್ರಚಾರದ ನೇರ ಪ್ರಸಾರದ ಸಂದರ್ಭದಲ್ಲಿ ಅವರು ಮಹಿಳೆಯೊಬ್ಬರ ಕೆನ್ನೆಗೆ ಚುಂಬಿಸುತ್ತಿರುವುದು ಸೆರೆಯಾಗಿದೆ ಎಂದು ಆರೋಪಿಸಿ, ಆಡಳಿತಾರೂಢ ಟಿಎಂಸಿ ಪಕ್ಷವು ಆ ಫೋಟೊವನ್ನು ತನ್ನ ಫೇಸ್ ಬುಕ್ ಪುಟದಲ್ಲಿ ಪ್ರಕಟಿಸಿತ್ತಾದರೂ, ನಂತರ ಅದನ್ನು ಅಳಿಸಿ ಹಾಕಿದೆ.
ಈ ಘಟನೆಯನ್ನು ಖಂಡಿಸಿರುವ ಮಾಲ್ಡಾದ ಟಿಎಂಸಿ ಉಪಾಧ್ಯಕ್ಷ ದುಲಾಲ್ ಸರ್ಕಾರ್, ಅಭ್ಯರ್ಥಿಯೊಬ್ಬರು ಮತ ಯಾಚನೆ ಸಂದರ್ಭಧಲ್ಲಿ ಇಂಥ ಕೃತ್ಯ ಮಾಡಬಹುದೆ? ಇದೇನಾ ʼನಾರಿ ಸಮ್ಮಾನ್ʼ ಎಂದು ಪ್ರಶ್ನಿಸಿದ್ದಾರೆ.
ಮತ್ತೊಂದೆಡೆ ಈ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ಅಭ್ಯರ್ಥಿ ಖಾಗೆನ್ ಮುರ್ಮು, ಚಿತ್ರದಲ್ಲಿರುವ ಬಾಲಕಿಯು ನನ್ನ ಪುತ್ರಿ ಸಮಾನ, ಟಿಎಂಸಿಯು ತಿರುಚಿದ ಚಿತ್ರವನ್ನು ಹಂಚಿಕೊಳ್ಳುವ ಮೂಲಕ ತನ್ನ ಹೊಲಸು ಮನಸ್ಥಿತಿಯನ್ನು ಪ್ರದರ್ಶಿಸಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
“ತೃಣಮೂಲದ ಯಾರೋ ಒಬ್ಬರು ಈ ಚಿತ್ರವನ್ನು ಪೋಸ್ಟ್ ಮಾಡಿದ್ದು, ಅದನ್ನು ಕೊಂಚ ತಿರುಚಲಾಗಿದೆ. ಇದು ಅವರ ಹೊಲಸು ಮನಸ್ಥಿತಿಯ ಪ್ರತಿಬಿಂಬವಾಗಿದೆ. ನಾನು ಚುಂಬಿಸಿದ ಬಾಲಕಿಯು ನನ್ನ ಕುಟುಂಬಕ್ಕೆ ಸೇರಿದವಳಾಗಿದ್ದಾಳೆ. ಆಕೆ ನಮ್ಮ ಮನೆ ಕೆಲಸದವರೊಬ್ಬರ ಪುತ್ರಿಯಾಗಿದ್ದು, ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಆಕೆಗೆ ಉತ್ತಮ ಫಲಿತಾಂಶ ಬಂದಿದೆ. ಹೀಗಾಗಿ ನಾನು ಆಕೆಗೆ ಚುಂಬಿಸಿದೆ. ನಾವು ನಮ್ಮ ಮಕ್ಕಳಿಗೂ ಅದನ್ನೇ ಮಾಡುತ್ತೇವೆ. ಹಾಗೂ ಆಕೆಯ ಪೋಷಕರಿಬ್ಬರೂ ಆಕೆಯ ಪಕ್ಕವೇ ನಿಂತಿದ್ದರು. ಯಾರೂ ಅದನ್ನು ತಪ್ಪಾಗಿ ಭಾವಿಸಿಲ್ಲ. ತೃಣಮೂಲ ಕಾಂಗ್ರೆಸ್ ಮತಕ್ಕಾಗಿ ಪರದಾಡುತ್ತಿದೆ” ಎಂದು ಅವರು ಕಿಡಿ ಕಾರಿದ್ದಾರೆ.
ಈ ಸಂಬಂಧ ಟಿಎಂಸಿ ವಿರುದ್ಧ ದೂರು ದಾಖಲಿಸಲಾಗುವುದು ಎಂದು ಬಿಜೆಪಿ ಅಭ್ಯರ್ಥಿ ಮುರ್ಮು ತಿಳಿಸಿದ್ದಾರೆ ಎಂದು ವರದಿಯಾಗಿದೆ.