ಸೂರತ್ ನಲ್ಲಿ ಬಿಜೆಪಿ ಅಭ್ಯರ್ಥಿ ಅವಿರೋಧ ಆಯ್ಕೆ | ತುರ್ತು ವಿಚಾರಣೆಗೆ ಗುಜರಾತ್ ಹೈಕೋರ್ಟ್ ನಿರಾಕರಣೆ
ಮುಕೇಶ್ ದಲಾಲ್ | PC : PTI
ಅಹ್ಮದಾಬಾದ್: ಗುಜರಾತ್ ನ ಸೂರತ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮುಕೇಶ್ ದಲಾಲ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂಬ ಚುನಾವಣಾ ಆಯೋಗದ ಘೋಷಣೆಯನ್ನು ಪ್ರಶ್ನಿಸಿ ಮತದಾರರೊಬ್ಬರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್)ಯ ತುರ್ತು ವಿಚಾರಣೆ ನಡೆಸಲು ಗುಜರಾತ್ ಹೈಕೋರ್ಟ್ ಮಂಗಳವಾರ ನಿರಾಕರಿಸಿದೆ.
ಫಲಿತಾಂಶ ಘೋಷಣೆಯನ್ನು ಪ್ರಶ್ನಿಸಿ ಅರ್ಜಿದಾರರು ಸಲ್ಲಿಸಿರುವ ಅರ್ಜಿಯು ಚುನಾವಣಾ ದೂರು ವರ್ಗಕ್ಕೆ ಬರುತ್ತದೆ, ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವರ್ಗಕ್ಕೆ ಬರುವುದಿಲ್ಲ ಎಂದು ಹೈಕೋರ್ಟ್ ನ ಮುಖ್ಯ ನ್ಯಾಯಾಧೀಶೆ ಸುನೀತಾ ಅಗರ್ವಾಲ್ ಹೇಳಿದರು.
‘‘ಕಾನೂನು ಏನು ಹೇಳುತ್ತದೆ ಎಂದರೆ, ಯಾವುದೇ ಅಭ್ಯರ್ಥಿಯ ಆಯ್ಕೆಯ ಬಗ್ಗೆ ಯಾವುದೇ ಕಾರಣಕ್ಕಾಗಿ ನಿಮಗೆ ಆಕ್ಷೇಪವಿದ್ದರೆ, ನೀವು ಚುನಾವಣಾ ಅರ್ಜಿಯನ್ನು ಸಲ್ಲಿಸಬೇಕು. ಅಭ್ಯರ್ಥಿಯೊಬ್ಬರನ್ನು ವಿಜಯಿ ಎಂಬುದಾಗಿ ಘೋಷಿಸುವ ಪ್ರಕ್ರಿಯೆ/ವಿಧಿವಿಧಾನದಲ್ಲಿ ದೋಷವಿದೆ ಎನ್ನುವುದನ್ನು ನೀವು ಹೇಳುತ್ತಿದ್ದೀರಿ. ಹಾಗಾಗಿ, ಇದು ಚುನಾವಣಾ ಅರ್ಜಿಯ ವಿಭಾಗಕ್ಕೆ ಬರುತ್ತದೆ. ಇದಕ್ಕೆ ಕಾನೂನಾತ್ಮಕ ಪರಿಹಾರ ಲಭ್ಯವಿರುವಾಗ, ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪುರಸ್ಕರಿಸಲು ಸಾಧ್ಯವಿಲ್ಲ’’ ಎಂದು ಮುಖ್ಯ ನ್ಯಾಯಾಧೀಶೆ ಹೇಳಿದರು.
‘‘ವ್ಯಕ್ತಿಗಳನ್ನು ಭಿನ್ನವಾಗಿ ನಡೆಸಿಕೊಳ್ಳಲು ಜನತಾ ಪ್ರಾತಿನಿಧ್ಯ ಕಾಯ್ದೆಯಲ್ಲಿ ಅವಕಾಶವಿಲ್ಲ. ಹಾಗಾಗಿ, ಇದನ್ನು ಪಿಐಎಲ್ ವಿಷಯವನ್ನಾಗಿ ಮಾಡಬೇಡಿ. ನಮ್ಮ ಪ್ರಕಾರ, ಇದು ತುರ್ತು ವಿಷಯವೇನೂ ಅಲ್ಲ. ನೀವು ತಪ್ಪು ಸ್ಥಳಕ್ಕೆ ಬಂದಿದ್ದೀರಿ’’ ಎಂದು ಮುಖ್ಯ ನ್ಯಾಯಾಧೀಶೆ ನುಡಿದರು.
ಸೂರತ್ ಲೋಕಸಭಾ ಕ್ಷೇತ್ರದ ಓರ್ವ ಮತದಾರ ಭವೇಶ್ ಭಾಯ್ ಪಟೇಲ್ ಎಂಬವರು ಬಿಜೆಪಿ ಅಭ್ಯರ್ಥಿಯ ಅವಿರೋಧ ಆಯ್ಕೆಯನ್ನು ಪ್ರಶ್ನಿಸಿ ಹೈಕೋರ್ಟ್ ಹೋಗಿದ್ದಾರೆ. ‘‘ಈ ಪ್ರಕರಣದಲ್ಲಿ, ನೋಟಾ ಆಯ್ಕೆಯನ್ನು ಮತದಾರರಿಗೆ ಒದಗಿಸಲಾಗಿಲ್ಲ’’ ಎಂಬ ಅಂಶದತ್ತ ಅವರ ಪರವಾಗಿ ನ್ಯಾಯಾಲಯಕ್ಕೆ ಹಾಜರಾದ ವಕೀಲರು ಬೆಟ್ಟುಮಾಡಿದರು.
ಗುಜರಾತ್ ನಲ್ಲಿ ಮೇ 7ರಂದು ಮತದಾನ ನಡೆಯಲಿದೆ.