ಟಿಎಂಸಿಯನ್ನು ಮಣಿಸಲು ಕೈಜೋಡಿಸಿದ ಬಿಜೆಪಿ, ಕಾಂಗ್ರೆಸ್, ಸಿಪಿಎಂ!
ಕೊಲ್ಕತ್ತಾ: ರಾಜಕೀಯದಲ್ಲಿ ಏನೂ ಸಂಭವಿಸಬಹುದು ಎನ್ನುವುದಕ್ಕೆ ಪಶ್ಚಿಮ ಬಂಗಾಳ ಪಂಚಾಯ್ತಿ ಚುನಾವಣೆ ಸಾಕ್ಷಿಯಾಗಿದೆ. ಪಶ್ಚಿಮ ಬಂಗಾಳದ ಕನಿಷ್ಠ ಮೂರು ಪಂಚಾಯ್ತಿಗಳಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ದೂರ ಇಡುವ ಸಲುವಾಗಿ ತಮ್ಮ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಬಿಜೆಪಿ, ಕಾಂಗ್ರೆಸ್ ಹಾಗೂ ಸಿಪಿಎಂ ಪರಸ್ಪರ ಕೈಜೋಡಿಸಿರುವ ಸ್ವಾರಸ್ಯಕರ ಪ್ರಸಂಗ ವರದಿಯಾಗಿದೆ.
ಪೂರ್ವ ಮಿಡ್ನಾಪುರ ಜಿಲ್ಲೆಯ ಮಹಿಸದಾಲ್ ಗ್ರಾಮಪಂಚಾಯ್ತಿಯಲ್ಲಿ ಬಿಜೆಪಿ ಹಾಗೂ ಸಿಪಿಎಂ ಮೈತ್ರಿ ಮಾಡಿಕೊಂಡು ಅಧಿಕಾರದ ಸೂತ್ರ ಹಿಡಿದಿವೆ. ಈ ಪಂಚಾಯ್ತಿಯ ಒಟ್ಟು 18 ಸ್ಥಾನಗಳ ಪೈಕಿ ಬಿಜೆಪಿ ಹಾಗೂ ಟಿಎಂಸಿ ತಲಾ ಎಂಟು ಸ್ಥಾನಗಳನ್ನು ಗೆದ್ದಿದ್ದವು. ಸಿಪಿಎಂ ಎರಡು ಸ್ಥಾನಗಳಲ್ಲಿ ಜಯ ಸಾಧಿಸಿತ್ತು. ಬಿಜೆಪಿಯ ಸುಭ್ರಾ ಪಾಂಡಾ ಹಾಗೂ ಸಿಪಿಎಂನ ಪರೇಶ್ ಪಾಣಿಗ್ರಾಹಿ ಪ್ರಧಾನ ಹಾಗೂ ಉಪಪ್ರಧಾನರಾಗಿ ಆಯ್ಕೆಯಾದರು.
ಅದೇರೀತಿ ಅಮೃತ್ ಬೇರಿಯಾದಲ್ಲಿ ಪಂಚಾಯ್ತಿ ಸಮಿತಿ ರಚನೆ ಸಂಬಂಧ ಬಿರುಸಿನ ಚಟುವಟಿಕೆಗಳು ನಡೆದವು. ತೃಣಮೂಲ ಕಾಂಗ್ರೆಸ್ ವಿರುದ್ಧ ಸಿಪಿಎಂ ಬಿಜೆಪಿಯನ್ನು ಬೆಂಬಲಿಸಿದೆ ಎಂದು ಮಹಿಸದಾಲ್ ಟಿಎಂಸಿ ಶಾಸಕ ತಿಲಕ್ ಕುಮಾರ್ ಚಕ್ರಬರ್ತಿ ದೂರಿದ್ದಾರೆ. ಆದರೆ ಸ್ಥಳೀಯ ಕಾರಣಗಳಿಗಾಗಿ ಪರಸ್ಪರ ಸಹಕರಿಸಿರುವುದಾಗಿ ಬಿಜೆಪಿ ಹಾಗೂ ಸಿಪಿಎಂ ಸ್ಪಷ್ಟಪಡಿಸಿವೆ. ಇಂಡಿಯಾ ಮೈತ್ರಿಕೂಟ ರಾಷ್ಟ್ರಮಟ್ಟದಲ್ಲಿದೆ. ಆದರೆ ಸ್ಥಳೀಯ ಜನತೆಯ ಭಾವನೆಗಳನ್ನು ಗೌರವಿಸುವ ಸಲುವಾಗಿ ಬಿಜೆಪಿ ನೇತೃತ್ವದ ಪಂಚಾಯ್ತಿ ಸಮಿತಿಗೆ ಬೆಂಬಲ ನೀಡಿರುವುದಾಗಿ ಸಿಪಿಎಂ ಪಂಚಾಯ್ತಿ ಸದಸ್ಯ ಬಾಲುಪ್ರಸಾದ್ ಜನಾ ಹೇಳಿದರು.
ಈ ಮೈತ್ರಿಯನ್ನು ಸಮರ್ಥಿಸಿಕೊಂಡಿರುವ ಬಿಜೆಪಿ ವಕ್ತಾರ ಶಮಿಕ್ ಭಟ್ಟಾಚಾರ್ಯ ಸ್ಥಳೀಯ ಮಟ್ಟದ ಸಮೀಕರಣಗಳು ರಾಜ್ಯ ಹಾಗೂ ರಾಷ್ಟ್ರಮಟ್ಟಕ್ಕಿಂತ ಭಿನ್ನ ಎಂದು ಸ್ಪಷ್ಟಪಡಿಸಿದ್ದಾರೆ.