ಹಿಂದೂಗಳು, ಮುಸ್ಲಿಮರ ನಡುವೆ ಕಂದಕ ಸೃಷ್ಟಿಸುತ್ತಿರುವ ಬಿಜೆಪಿ: ಸಂಭಾಲ್ ಹಿಂಸಾಚಾರ ಕುರಿತು ರಾಹುಲ್ ಗಾಂಧಿ ಪ್ರತಿಕ್ರಿಯೆ
ತಕ್ಷಣ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಕ್ಕೆ ಆಗ್ರಹ
ರಾಹುಲ್ ಗಾಂಧಿ | PC : PTI
ಬಿಜೆಪಿಯು ಹಿಂದೂಗಳು ಮತ್ತು ಮುಸ್ಲಿಮರ ನಡುವೆ ಕಂದಕವನ್ನು ಸೃಷ್ಟಿಸುತ್ತಿದೆ ಎಂದು ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಸೋಮವಾರ ಆರೋಪಿಸಿದ್ದಾರೆ ಹಾಗೂ ಈ ವಿಷಯದಲ್ಲಿ ತಕ್ಷಣ ಮಧ್ಯಪ್ರವೇಶಿಸುವಂತೆ ಸುಪ್ರೀಂ ಕೋರ್ಟನ್ನು ಅವರು ಒತ್ತಾಯಿಸಿದ್ದಾರೆ.
ಉತ್ತರಪ್ರದೇಶದ ಸಂಭಾಲ್ನಲ್ಲಿರುವ ಶಾಹಿ ಜಾಮಾ ಮಸೀದಿಯ ಸಮೀಕ್ಷೆಯ ವೇಳೆ ನಡೆದ ಹಿಂಸಾಚಾರದಲ್ಲಿ ನಾಲ್ವರು ಮೃತಪಟ್ಟ ಒಂದು ದಿನದ ಬಳಿಕ ಈ ಅವರು ಈ ಹೇಳಿಕೆ ನೀಡಿದ್ದಾರೆ.
‘‘ಉತ್ತರಪ್ರದೇಶದ ಸಂಭಾಲ್ನ ಇತ್ತೀಚಿನ ವಿವಾದದಲ್ಲಿ ರಾಜ್ಯ ಸರಕಾರದ ಪಕ್ಷಪಾತಪೂರಿತ ಮತ್ತು ಅವಸರದ ಧೋರಣೆಯು ಅತ್ಯಂತ ದುರದೃಷ್ಟಕರವಾಗಿದೆ. ಹಿಂಸಾಚಾರ ಮತ್ತು ಗುಂಡು ಹಾರಾಟದಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ನನ್ನ ತೀವ್ರ ಸಂತಾಪ ವ್ಯಕ್ತಪಡಿಸುತ್ತೇನೆ’’ ಎಂಬುದಾಗಿ ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ರಾಹುಲ್ ಗಾಂಧಿ ಬರೆದಿದ್ದಾರೆ.
‘‘ರಾಜ್ಯ ಸರಕಾರವು ಸಂಬಂಧ ಪಟ್ಟ ಎಲ್ಲಾ ಪಕ್ಷಗಳ ಅಹವಾಲುಗಳನ್ನು ಕೇಳದೆ ಕಟುವಾಗಿ ವರ್ತಿಸಿದೆ. ಅದು ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿತು ಮತ್ತು ಜನರ ಸಾವುಗಳಿಗೆ ಕಾರಣವಾಯಿತು. ಇದಕ್ಕೆ ಬಿಜೆಪಿ ಸರಕಾರವು ನೇರವಾಗಿ ಜವಾಬ್ದಾರಿಯಾಗಿದೆ’’ ಎಂದು ಅವರು ಆರೋಪಿಸಿದರು.
‘‘ಹಿಂದೂ ಮತ್ತು ಮುಸ್ಲಿಮ್ ಸಮುದಾಯಗಳ ನಡುವೆ ಬಿರುಕು ಮೂಡಿಸಲು ಮತ್ತು ತಾರತಮ್ಯ ಸೃಷ್ಟಿಸಲು ಬಿಜೆಪಿಯು ಅಧಿಕಾರವನ್ನು ದುರ್ಬಳಕೆ ಮಾಡುತ್ತಿದೆ. ಇದರಲ್ಲಿ ರಾಜ್ಯದ ಹಿತಾಸಕ್ತಿಯೂ ಇಲ್ಲ, ದೇಶದ ಹಿತಾಸಕ್ತಿಯೂ ಇಲ್ಲ. ಈ ವಿಷಯದಲ್ಲಿ ಎಷ್ಟು ಸಾಧ್ಯವೋ ಅಷ್ಟು ಬೇಗ ಮಧ್ಯಪ್ರವೇಶಿಸಿ ನ್ಯಾಯ ನೀಡಬೇಕು ಎಂದು ನಾನು ಸುಪ್ರೀಂ ಕೋರ್ಟ್ಗೆ ಮನವಿ ಮಾಡುತ್ತೇನೆ’’ ಎಂದು ರಾಹುಲ್ ಗಾಂಧಿ ಹೇಳಿದರು.
ಅದೇ ವೇಳೆ, ಶಾಂತಿ ಮತ್ತು ಸಾಮರಸ್ಯ ಕಾಯ್ದುಕೊಳ್ಳುವಂತೆಯೂ ಅವರು ಜನರಿಗೆ ಮನವಿ ಮಾಡಿದರು.
‘‘ಭಾರತವು ಕೋಮುವಾದ ಮತ್ತು ದ್ವೇಷದ ದಾರಿಯಲ್ಲಿ ಹೋಗದೆ, ಏಕತೆ ಮತ್ತು ಸಂವಿಧಾನದ ಹಾದಿಯಲ್ಲಿ ಮುಂದುವರಿಯುವಂತೆ ನೋಡಿಕೊಳ್ಳುವುದಕ್ಕಾಗಿ ನಾವೆಲ್ಲರೂ ಜೊತೆಗೂಡಬೇಕು’’ ಎಂದು ಕಾಂಗ್ರೆಸ್ ನಾಯಕ ಹೇಳಿದರು.
ಜನರ ನಡುವೆ ಬಿರುಕು ಮೂಡಿಸಲು ಆದಿತ್ಯನಾಥ್ ಸರಕಾರವು ಅಧಿಕಾರವನ್ನು ದುರ್ಬಳಕೆ ಮಾಡುತ್ತಿದೆ ಎಂಬ ಆರೋಪವನ್ನು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಮಾಡಿದ್ದಾರೆ.
ಅಖಿಲೇಶ್ ಯಾದವ್ | PC : PTI
ಚುನಾವಣಾ ಅವ್ಯವಹಾರಗಳಿಂದ ಗಮನ ಬೇರೆಡೆ ಸೆಳೆಯುವ ತಂತ್ರ: ಅಖಿಲೇಶ್
ಉತ್ತರಪ್ರದೇಶ ಸರಕಾರವು ಸಂಭಾಲ್ನಲ್ಲಿ ಗಲಭೆಯನ್ನು ಆಯೋಜಿಸಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಸೋಮವಾರ ಆರೋಪಿಸಿದರು. ಜನರ ಸಾವುಗಳಿಗೆ ಕಾರಣರಾದ ಪೊಲೀಸ್ ಅಧಿಕಾರಿಗಳು ಮತ್ತು ಜಿಲ್ಲಾಡಳಿತದ ಅಧಿಕಾರಿಗಳನ್ನು ಅಮಾನತುಗೊಳಿಸಿ ಅವರ ವಿರುದ್ಧ ಕೊಲೆ ಮೊಕದ್ದಮೆಗಳನ್ನು ದಾಖಲಿಸಬೇಕು ಎಂದು ಅವರು ಒತ್ತಾಯಿಸಿದರು.
ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಆದಿತ್ಯನಾಥ್ ನೇತೃತ್ವದ ಸರಕಾರವು ಅವ್ಯವಹಾರದಲ್ಲಿ ತೊಡಗಿತ್ತು, ಮತಗಳನ್ನು ಲೂಟಿ ಮಾಡಿತ್ತು ಮತ್ತು ತನ್ನ ಕೃತ್ಯಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಸಂಭಾಲ್ನಲ್ಲಿ ಹಿಂಸೆಯನ್ನು ಆಯೋಜಿಸಿದೆ ಎಂದು ಯಾದವ್ ಆರೋಪಿಸಿದರು. ‘‘‘ದ ಸಾಬರ್ಮತಿ ರಿಪೋರ್ಟ್’ ಚಿತ್ರವನ್ನು ನೋಡಿದ ಬಳಿಕ, ತಾವು ಕೂಡ ದೊಡ್ಡ ನಾಯಕರಾಗಬೇಕೆಂದು ಬಯಸಿದ ಕೆಲವು ಬಿಜೆಪಿ ನಾಯಕರು, ಸಂಭಾಲ್ನಲ್ಲಿ ಈ ಹಿಂಸಾಚಾರವನ್ನು ಸೃಷ್ಟಿಸಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ’’ ಎಂದು ಯಾದವ್ ನುಡಿದರು.
‘ದ ಸಾಬರ್ಮತಿ ರಿಪೋರ್ಟ್’ ಚಿತ್ರವು ಗೋಧ್ರಾ ಘಟನೆಯನ್ನಾಧರಿಸಿದ್ದಾಗಿದೆ.
ಪಕ್ಷದ ಸಂಸದರೊಂದಿಗೆ ಲೋಕಸಭಾ ಸ್ಪೀಕರ್ ಓಮ್ ಬಿರ್ಲಾರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಭಾಲ್ನಲ್ಲಿ ನಡೆದ ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ಘಟನೆಯ ಕುರಿತ ಮಾಹಿತಿಯನ್ನು ಮರೆಮಾಚಿಸಲಾಗುತ್ತಿದೆ ಎಂದು ಅವರು ಆರೋಪಿಸಿದರು. ‘‘ಹಿಂಸಾಚಾರದಲ್ಲಿ ಮೃತಪಟ್ಟವರ ಪೈಕಿ ಒಬ್ಬರಾಗಿರುವ ನಯೀಮ್ ಪೊಲೀಸರ ಗೋಲಿಬಾರ್ನಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ನಾನು ಮೊದಲೇ ಹೇಳಿದ್ದೇನೆ. ನಿಮ್ಮಲ್ಲಿ ಎಲ್ಲಾ ವೀಡಿಯೊಗಳಿವೆ. ಈ ಹಿಂಸೆಯನ್ನು ಆಯೋಜಿಸಿದ್ದು ಸರಕಾರ’’ ಎಂದರು.