ಬಿಜೆಪಿಯಿಂದ ತೆರಿಗೆ ಭಯೋತ್ಪಾದನೆ : 1700 ಕೋಟಿ ರೂ. ಐಟಿ ನೋಟಿಸ್ ನಂತರ ಕಾಂಗ್ರೆಸ್ ಆರೋಪ
Photo: indianexpress.com
ಹೊಸದಿಲ್ಲಿ: “ಬಿಜೆಪಿ ತೆರಿಗೆ ಭಯೋತ್ಪಾದನೆಯಲ್ಲಿ ತೊಡಗಿದೆ ಹಾಗೂ ಕಾಂಗ್ರೆಸ್ ಪಕ್ಷವನ್ನು ಆರ್ಥಿಕವಾಗಿ ದುರ್ಬಲಗೊಳಿಸಲು ಯತ್ನಿಸುತ್ತಿದೆ,” ಎಂದು ಕಾಂಗ್ರೆಸ್ ನಾಯಕ ಜೈರಾಂ ರಮೇಶ್ ದೂರಿದ್ದಾರೆ.
ಪಕ್ಷಕ್ಕೆ ಆದಾಯ ತೆರಿಗೆ ಇಲಾಖೆಯ 1,700 ಕೋಟಿ ರೂ. ಪಾವತಿಸಬೇಕೆಂಬ ಹೊಸ ನೋಟಿಸ್ ಬಂದ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ತಮ್ಮ ಅಸಮಾಧಾನ ತೋಡಿಕೊಂಡರು.
“ಬಿಜೆಪಿ ತೆರಿಗೆ ಕಾನೂನುಗಳನ್ನು ಉಲ್ಲಂಘಿಸುತ್ತಿದೆ. ಐಟಿ ಇಲಾಖೆ ಪಕ್ಷದಿಂದ 4,600 ಕೋಟಿ ರೂ. ವಸೂಲಿ ಮಾಡುವ ಯೋಜನೆಯಲ್ಲಿದೆ,” ಎಂದು ಪಕ್ಷದ ಹಿರಿಯ ನಾಯಕ ಅಜಯ್ ಮಾಕೆನ್ ಹೇಳಿದರು.
ಆರ್ಥಿಕ ವರ್ಷ 2017-18 ರಿಂದ 2020-21ವರೆಗಿನ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವಲ್ಲಿ ವ್ಯತ್ಯಯಗಳಿಗಾಗಿ ಬಡ್ಡಿಯೊಂದಿಗೆ ತೆರಿಗೆ ದಂಡವನ್ನು ಐಟಿ ಇಲಾಖೆ ಕಾಂಗ್ರೆಸ್ ಪಕ್ಷಕ್ಕೆ ವಿಧಿಸಿದೆ ಎನ್ನಲಾಗಿದೆ.
ಇತ್ತೀಚೆಗಷ್ಟೇ ಕಾಂಗ್ರೆಸ್ ಪಕ್ಷದ ಖಾತೆಗಳಿಂದ ಐಟಿ ಇಲಾಖೆ ಹಿಂದಿನ ಬಾಕಿ ಎಂದು ಹೇಳಿ ರೂ 135 ಕೋಟಿ ಬಾಕಿ ವಸೂಲಿಯನ್ನು ಮಾಡಿತ್ತು.
ಕಾಂಗ್ರೆಸ್ ಪಕ್ಷದ ಖಾತೆಯಿಂದ 2014-2021 ಅವಧಿಯಲ್ಲಿ ರೂ 523.87 ಕೋಟಿ ಲೆಕ್ಕಕೆ ಸಿಗದ ವಹಿವಾಟು ನಡೆದಿದೆ ಎಂದೂ ಐಟಿ ಇಲಾಖೆ ಆರೋಪಿಸಿದೆ.