ಮತದಾರರಿಗೆ ನಗದು ಹಂಚಿಕೆ ಆರೋಪ: ಬಿಜೆಪಿ ರಾಷ್ಟ್ರೀಯ ಪ್ರ.ಕಾರ್ಯದರ್ಶಿ ತಾವ್ಡೆ ವಿರುದ್ಧ ಎರಡು ಎಫ್ಐಆರ್ ದಾಖಲು
ವಿನೋದ್ ತಾವ್ಡೆ (Photo: PTI)
ಮಹಾರಾಷ್ಟ್ರ: ಮತದಾರರಿಗೆ ನಗದು ಹಂಚಿಕೆ, ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ, ಬಿಜೆಪಿ ಅಭ್ಯರ್ಥಿ ರಾಜನ್ ನಾಯಕ್ ಮತ್ತು ಇತರರ ವಿರುದ್ಧ ಮಹಾರಾಷ್ಟ್ರದ ತುಳಿಂಜ್ ಪೊಲೀಸ್ ಠಾಣೆಯಲ್ಲಿ ಎರಡು ಎಫ್ ಐಆರ್ ದಾಖಲಾಗಿದೆ.
ಹೋಟೆಲ್ ನಲ್ಲಿ ಒಟ್ಟುಗೂಡುವ ಮೂಲಕ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದಲ್ಲಿ ಮೊದಲ ಎಫ್ ಐಆರ್ ಮತ್ತು ಮತದಾರರಿಗೆ ನಗದು ಮತ್ತು ಮದ್ಯ ಹಂಚಿಕೆ ಮೂಲಕ ಆಮಿಷವೊಡ್ಡಿದ ಆರೋಪದಲ್ಲಿ ಎರಡನೇ ಎಫ್ ಐಆರ್ ದಾಖಲಾಗಿದೆ.
ತುಳಿಂಜ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಮೊದಲ ಎಫ್ಐಆರ್ ನಲ್ಲಿ, ಬಿಜೆಪಿ ನಾಯಕ ವಿನೋದ್ ತಾವ್ಡೆ, ನಲಸೋಪರದ ಬಿಜೆಪಿ ಅಭ್ಯರ್ಥಿ ರಾಜನ್ ನಾಯಕ್ ಮತ್ತು ಪಕ್ಷದ ಪದಾಧಿಕಾರಿ ಮನೋಜ್ ಬರೋಟ್ ಸೇರಿದಂತೆ 22 ಜನರ ಹೆಸರನ್ನು ಉಲ್ಲೇಖಿಸಲಾಗಿದೆ.
ವಿನೋದ್ ತಾವ್ಡೆ ವಿರಾರ್ ನ ಹೋಟೆಲ್ ನಲ್ಲಿ ನಗದು ಹಂಚಿದ್ದಾರೆ ಎಂದು ಬಹುಜನ ವಿಕಾಸ್ ಆಘಾಡಿ (ಬಿವಿಎ) ಕಾರ್ಯಕರ್ತರು ಆರೋಪಿಸಿದ್ದರು. ಇದರ ಬೆನ್ನಲ್ಲೇ ಹೊಟೇಲ್ ಮೇಲೆ ದಾಳಿ ನಡೆಸಿದ ಪೊಲೀಸರು ನಗದು ವಶಪಡಿಸಿಕೊಂಡಿದ್ದರು.
ಪಕ್ಷದ ಕಾರ್ಯಕರ್ತರು ತಾವ್ಡೆ ಹಣ ಹಂಚುವುದನ್ನು ನೋಡಿದ್ದಾರೆ. ಐದು ಕೋಟಿ ರೂ. ನಗದನ್ನು ಹಂಚಲಾಗಿದೆ. ನಾವು ಡೈರಿಗಳನ್ನು ವಶಪಡಿಸಿಕೊಂಡಿದ್ದೇವೆ. ತಾವ್ಡೆ ಅವರು ನನಗೆ 25 ಬಾರಿ ಕರೆ ಮಾಡಿ ಕ್ಷಮೆಯಾಚಿಸಿದ್ದಾರೆ. ಚುನಾವಣಾ ಆಯೋಗ, ಪೊಲೀಸರು ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಬಹುಜನ ವಿಕಾಸ್ ಅಘಾಡಿ ನಾಯಕ ಹಿತೇಂದ್ರ ಠಾಕೂರ್ ಆಗ್ರಹಿಸಿದ್ದರು.
ಬಿಜೆಪಿ ಮುಖಂಡ ವಿನೋದ್ ತಾವ್ಡೆ ಮತ್ತು ಇತರ ಕೆಲವರು ಹಣ ಹಂಚುತ್ತಿದ್ದಾರೆ ಎಂದು ಬಿವಿಎ ಕಾರ್ಯಕರ್ತರಿಂದ ನಮಗೆ ದೂರು ಬಂದಿತ್ತು. ಚುನಾವಣಾ ಅಧಿಕಾರಿಗಳು ಪೊಲೀಸರೊಂದಿಗೆ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ಹೋಟೆಲ್ನಲ್ಲಿ 9.93 ಲಕ್ಷ ರೂ. ನಗದು ಪತ್ತೆಯಾಗಿತ್ತು ಎಂದು ಪಾಲ್ಘರ್ ಜಿಲ್ಲಾಧಿಕಾರಿ ಗೋವಿಂದ್ ಬೊಡ್ಕೆ ಹೇಳಿದ್ದಾರೆ.