“ಶರದ್ ಪವಾರ್ ಅವರ ರಾಜಕೀಯ ಜೀವನವನ್ನು ಅಂತ್ಯಗೊಳಿಸಲು ಬಿಜೆಪಿಯು ಅಜಿತ್ ಪವಾರ್ ಗೆ ‘ಸುಪಾರಿ’ ನೀಡಿದೆ”
ಮಹಾರಾಷ್ಟ್ರದ ಮಾಜಿ ಸಚಿವ ಅನಿಲ್ ದೇಶಮುಖ್ ಹೇಳಿಕೆ
ಅನಿಲ್ ದೇಶಮುಖ್ | Photo: PTI
ವಾರ್ಧಾ(ಮಹಾರಾಷ್ಟ್ರ): ಬಿಜೆಪಿಯು ಎನ್ಸಿಪಿ ಸ್ಥಾಪಕ ಶರದ್ ಪವಾರ್ ಅವರ ರಾಜಕೀಯ ವೃತ್ತಿಜೀವನವನ್ನು ಅಂತ್ಯಗೊಳಿಸಲು ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರಿಗೆ ‘ಸುಪಾರಿ’ ನೀಡಿದೆ ಎಂದು ಮಹಾರಾಷ್ಟ್ರದ ಮಾಜಿ ಗೃಹಸಚಿವ ಅನಿಲ್ ದೇಶಮುಖ್ ಹೇಳಿದ್ದಾರೆ. ದೇಶಮುಖ್ ಎನ್ಸಿಪಿಯ ಶರದ್ ಪವಾರ್ ಬಣಕ್ಕೆ ಸೇರಿದ್ದಾರೆ.
ಕಳೆದ ಜುಲೈನಲ್ಲಿ ಅಜಿತ್ ಪವಾರ್ ಮತ್ತು ಪಕ್ಷದ ಇತರ ಎಂಟು ಶಾಸಕರು ಬಿಜೆಪಿ ಮತ್ತು ಏಕನಾಥ ಶಿಂದೆ ನೇತೃತ್ವದ ಶಿವಸೇನೆ ಸರಕಾರವನ್ನು ಸೇರಿದ ಬಳಿಕ ಎನ್ಸಿಪಿ ಇಬ್ಭಾಗಗೊಂಡಿತ್ತು.
ಗುರುವಾರ ವಾರ್ಧಾದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೇಶಮುಖ್, ಭೋಪಾಲ್ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಭಾಷಣದ ಬೆನ್ನಲ್ಲೇ ಅಜಿತ್ ಪವಾರ್ ಮತ್ತು ಅವರ ಸಹಚರರು ಅವಸರದಿಂದ ಸರಕಾರಕ್ಕೆ ಸೇರ್ಪಡೆಗೊಂಡಿದ್ದರು ಎನ್ನುವುದು ಇಡೀ ಮಹಾರಾಷ್ಟ್ರ ಮತ್ತು ಭಾರತಕ್ಕೆ ಗೊತ್ತಿದೆ ಎಂದು ಹೇಳಿದರು.
ಎನ್ಸಿಪಿ ವಿಭಜನೆಗೆ ಕೆಲವೇ ದಿನಗಳ ಮುನ್ನ ಮೋದಿ,ಅದು 70,000 ಕೋ.ರೂ.ಗಳ ಭ್ರಷ್ಟಾಚಾರದಲ್ಲಿ ಭಾಗಿಯಾಗಿದೆ ಎಂದು ಆರೋಪಿಸಿದ್ದರು.
‘ಅಜಿತ್ ಪವಾರ್ ಭಿನ್ನ ದಾರಿಯನ್ನು ತುಳಿದಿದ್ದು ಏಕೆ ಎನ್ನುವುದು ನಿಮಗೆ ಗೊತ್ತೇ? ಹಿರಿಯ ಎನ್ಸಿಪಿ ನಾಯಕರು ನಾನು ಅನುಭವಿಸಿದ್ದ ತೊಂದರೆಗಳನ್ನು ಎದುರಿಸಲು ಬಯಸಿರಲಿಲ್ಲ’ ಎಂದು ಭ್ರಷ್ಟಾಚಾರ ಆರೋಪದಲ್ಲಿ ತನ್ನ ಬಂಧನವನ್ನು ಉಲ್ಲೇಖಿಸಿ ದೇಶಮುಖ್ ಹೇಳಿದರು.
ಅಜಿತ್ ಪವಾರ್ರನ್ನು ರಾಜ್ಯದ ಮುಖ್ಯಮಂತ್ರಿಯಾಗಿ ನೋಡಲು ಅವರ ಬೆಂಬಲಿಗರ ಬಯಕೆ ಕುರಿತು ಪ್ರಶ್ನೆಗೆ ದೇಶಮುಖ್, ರಾಜ್ಯದ ಆಡಳಿತ ಪಾಲುದಾರರು ಏನು ನಿರ್ಧರಿಸಿದ್ದಾರೆ ಎನ್ನುವುದು ತನಗೆ ಗೊತ್ತಿಲ್ಲ. ಆದರೆ ಸರಕಾರದಲ್ಲಿ ಬಿಜೆಪಿ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಅವರನ್ನು ಕಡೆಗಣಿಸಲಾಗುತ್ತಿದೆ ಎಂದು ಉತ್ತರಿಸಿದರು.