ಬಿಜೆಪಿ ಸರಕಾರ ನನ್ನ ಪತಿಯನ್ನು ಹತ್ಯೆಗೈಯಲು ಬಯಸಿದೆ: ಸುನಿತಾ ಕೇಜ್ರಿವಾಲ್
ಸುನಿತಾ ಕೇಜ್ರಿವಾಲ್ | PC : PTI
ರಾಂಚಿ : ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಹತ್ಯೆಗೈಯುವ ಉದ್ದೇಶದಿಂದ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಕಾರಾಗೃಹದಲ್ಲಿ ಅವರಿಗೆ ಇನ್ಸುಲಿನ್ ನಿರಾಕರಿಸುತ್ತಿದೆ ಎಂದು ಅವರ ಪತ್ನಿ ಸುನಿತಾ ಕೇಜ್ರಿವಾಲ್ ರವಿವಾರ ಆರೋಪಿಸಿದ್ದಾರೆ.
ಇಲ್ಲಿ ನಡೆದ ಇಂಡಿಯಾ ಮೈತ್ರಿಕೂಟದ ‘ನ್ಯಾಯ್ ರ್ಯಾಲಿ’ಯಲ್ಲಿ ಮಾತನಾಡಿದ ಅವರು, ಬಿಜೆಪಿಯ ಸರ್ವಾಧಿಕಾರದ ವಿರುದ್ಧ ‘ಇಂಡಿಯಾ’ ಮೈತ್ರಿಕೂಟ ಹೋರಾಟ ನಡೆಸಲಿದೆ ಹಾಗೂ ಜಯ ಗಳಿಸಲಿದೆ ಎಂದು ಪ್ರತಿಪಾದಿಸಿದರು.
‘‘ಅವರು ನನ್ನ ಪತಿ ಅರವಿಂದ ಕೇಜ್ರಿವಾಲ್ ಅವರನ್ನು ಹತ್ಯೆಗೈಯಲು ಬಯಸಿದ್ದಾರೆ. ಅವರ ಆಹಾರ ಕೂಡ ಕ್ಯಾಮೆರಾದ ಪರಿವೀಕ್ಷಣೆಯಲ್ಲಿದೆ. ಅವರಿಗೆ ಇನ್ಸುಲಿನ್ ನಿರಾಕರಿಸಲಾಗುತ್ತಿದೆ. ನನ್ನ ಪತಿ ಡಯಾಬಿಟಿಸ್ ರೋಗಿಯಾಗಿದ್ದು, ಕಳೆದ 12 ವರ್ಷಗಳಿಂದ ಇನ್ಸುಲಿನ್ ತೆಗೆದುಕೊಳ್ಳುತ್ತಿದ್ದಾರೆ. ಅವರಿಗೆ ಪ್ರತಿದಿನ 50 ಯೂನಿಟ್ ಇನ್ಸುಲಿನ್ ಬೇಕಾಗಿದೆ’’ ಎಂದು ಅವರು ಹೇಳಿದರು.
ಜನರ ಸೇವೆ ಮಾಡುತ್ತಿರುವುದಕ್ಕಾಗಿ ನನ್ನ ಪತಿಯನ್ನು ಜೈಲಿಗೆ ಹಾಕಲಾಗಿದೆ. ಅವರ ವಿರುದ್ಧದ ಯಾವುದೇ ಆರೋಪ ಸಾಬೀತಾಗಿಲ್ಲ. ನಾವು ಸರ್ವಾಧಿಕಾರದ ವಿರುದ್ಧ ಹೋರಾಡಲಿದ್ದೇವೆ ಹಾಗೂ ಜಯ ಗಳಿಸಲಿದ್ದೇವೆ ಎಂದು ಅವರು ಹೇಳಿದರು.