ಫೆಬ್ರವರಿ 20ರಂದು ನೂತನ ದಿಲ್ಲಿ ಸರಕಾರ ಪ್ರಮಾಣ ವಚನ ಸಾಧ್ಯತೆ

PC : PTI
ಹೊಸದಿಲ್ಲಿ: ದಿಲ್ಲಿಯ ನೂತನ ಸರಕಾರದ ಪ್ರಮಾಣ ವಚನ ಸಮಾರಂಭ ಫೆಬ್ರವರಿ 19 ಅಥವಾ 20ರಂದು ನಡೆಯುವ ಸಾಧ್ಯತೆ ಇದ್ದು, ನೂತನ ಸರಕಾರವು ಶುದ್ಧ ಕುಡಿಯುವ ನೀರು, ಸುಧಾರಿತ ನಾಗರಿಕ ಮೂಲಸೌಕರ್ಯ ಮತ್ತಿತರ ವಿಷಯಗಳಿಗೆ ಆದ್ಯತೆ ನೀಡಲಿದೆ ಎಂದು ಬಿಜೆಪಿ ನಾಯಕರು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ವಿದೇಶ ಪ್ರವಾಸದಿಂದ ಮರಳುತ್ತಿದ್ದು, ಬಿಜೆಪಿ ಶಾಸಕಾಂಗ ಪಕ್ಷದ ಸಭೆಗೆ ಕೂಡಲೇ ವೀಕ್ಷಕರನ್ನು ನೇಮಿಸಲಾಗುವುದು ಎಂದು ನೂತನವಾಗಿ ಚುನಾಯಿತರಾಗಿರುವ ಬಿಜೆಪಿ ಶಾಸಕ ಹಾಗೂ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಮಂಜಿಂದರ್ ಸಿಂಗ್ ಸಿರ್ಸಾ ಹೇಳಿದ್ದಾರೆ.
“ಫೆಬ್ರವರಿ 19-20ರ ಆಸುಪಾಸು ನೂತನ ಸರಕಾರ ಕಾರ್ಯಾರಂಭ ಮಾಡಲಿದೆ” ಎಂದು ರಜೌರಿ ಗಾರ್ಡನ್ ಕ್ಷೇತ್ರದ ಶಾಸಕರಾದ ಮಂಜಿಂದರ್ ಸಿಂಗ್ ತಿಳಿಸಿದ್ದಾರೆ. ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳ ಪೈಕಿ ಅವರೂ ಕೂಡಾ ಒಬ್ಬರು ಎಂದು ಹೇಳಲಾಗಿದೆ.
ಈ ನಡುವೆ, ದಿಲ್ಲಿಯ ನೂತನ ಮುಖ್ಯಮಂತ್ರಿಯನ್ನು ಬಿಜೆಪಿ 48 ಶಾಸಕರು ಕೂಡಿ ಚುನಾಯಿಸಲಿದ್ದಾರೆ ಎಂದು ಆರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಮೋಹನ್ ಸಿಂಗ್ ಬಿಶ್ಟ್ ಹೇಳಿದ್ದಾರೆ.