ಬಿಜೆಪಿಯೆಂದಿಗೂ ಸಂವಿಧಾನ ಪೀಠಿಕೆಯನ್ನು ಬದಲಿಸುವುದಿಲ್ಲ, ಮೀಸಲಾತಿ ಮುಂದುವರಿಯಲಿದೆ: ರಾಜನಾಥ್ ಸಿಂಗ್
ರಾಜನಾಥ್ ಸಿಂಗ್ | PC : PTI
ಹೊಸದಿಲ್ಲಿ: ಬಿಜೆಪಿ ಸರಕಾರವೆಂದಿಗೂ ಸಂವಿಧಾನ ಪೀಠಿಕೆಯನ್ನು ಬದಲಿಸುವುದಿಲ್ಲ ಹಾಗೂ ಮೀಸಲಾತಿಯನ್ನು ಅಂತ್ಯಗೊಳಿಸುವುದಿಲ್ಲ ಎಂದು ಹೇಳಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಮತ ಬ್ಯಾಂಕ್ ರಾಜಕಾರಣಕ್ಕಾಗಿ ಕಾಂಗ್ರೆಸ್ ಭೀತಿಯನ್ನು ಸೃಷ್ಟಿಸುತ್ತಿದ್ದು, ತಪ್ಪು ಮಾಹಿತಿಯನ್ನು ಹರಡುತ್ತಿದೆ ಎಂದು ಆರೋಪಿಸಿದ್ದಾರೆ.
PTI ಸುದ್ದಿ ಸಂಸ್ಥೆಗೆ ಸಂದರ್ಶನ ನೀಡಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಬಿಜೆಪಿ ಮತ್ತೆ ಅಧಿಕಾರಕ್ಕೆ ಮರಳಿದರೆ ಸಂವಿಧಾನವನ್ನು ಬದಲಿಸುತ್ತದೆ ಎಂದು ಕಾಂಗ್ರೆಸ್ ಪುಕಾರು ಹಬ್ಬಿಸುತ್ತಿದೆ ಎಂದು ವಾಗ್ದಾಳಿ ನಡೆಸಿದ್ದು, ವಿಶೇಷವಾಗಿ ಸಂವಿಧಾನದ ಪೀಠಿಕೆಯನ್ನು ಬದಲಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.
ಬಿಜೆಪಿ ಅಧಿಕಾರಕ್ಕೆ ಮರಳಿದರೆ ಭಾರತವನ್ನು ವ್ಯಾಖ್ಯಾನಿಸುವ ‘ಜಾತ್ಯತೀತ’ ಪದವನ್ನು ಸಂವಿಧಾನದ ಪೀಠಿಕೆಯಿಂದ ಕೈಬಿಡಬಹುದು ಎಂಬ ವಿರೋಧಿಗಳ ಕಳವಳಕ್ಕೆ ಸಂಬಂಧಿಸಿದಂತೆ ಸಂವಿಧಾನ ಪೀಠಿಕೆಯನ್ನು ಬದಲಿಸುವುದಿಲ್ಲ ಎಂಬ ಅವರ ಭರವಸೆಯು ಹೊರ ಬಿದ್ದಿದೆ.
ಬಿಜೆಪಿಯೇನಾದರೂ ಅಧಿಕಾರ ಉಳಿಸಿಕೊಂಡರೆ ಸಂವಿಧಾನವನ್ನು ಹರಿದು ಬಿಸಾಕಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸುತ್ತಿದ್ದಾರೆ. ಸಂವಿಧಾನದ ಪೀಠಿಕೆಯಿಂದ ‘ಜಾತ್ಯತೀತ’ ಪದವನ್ನು ಬಿಜೆಪಿ ಕೈಬಿಡಬಹುದು ಎಂದು ಕೆಲವು ಕಾಂಗ್ರೆಸ್ ಪದಾಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ, “ಕಾಂಗ್ರೆಸ್ ಸಂವಿಧಾನಕ್ಕೆ 80 ಬಾರಿ ತಿದ್ದುಪಡಿ ತಂದಿದೆ. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಅವರು ಸಂವಿಧಾನದ ಪೀಠಿಕೆಯನ್ನು ಬದಲಿಸಿದ್ದರು” ಎಂದು ರಾಜನಾಥ್ ಸಿಂಗ್ ಆರೋಪಿಸಿದ್ದಾರೆ.
ಕಾಂಗ್ರೆಸ್ ಮತ ಬ್ಯಾಂಕ್ ರಾಜಕಾರಣದ ಮೇಲೆ ಕಣ್ಣು ನೆಟ್ಟಿರುವುದರಿಂದ ಅದು ಸಮಾಜದಲ್ಲಿ ಸೌಹಾರ್ದತೆಯನ್ನು ಉತ್ತೇಜಿಸುವುದಿಲ್ಲ ಎಂದೂ ಅವರು ದೂರಿದ್ದಾರೆ.
ಭಾರತದ ಸರ್ವತೋಮುಖ ಅಭಿವೃದ್ಧಿ ಹಾಗೂ ದೇಶದ ಪ್ರತಿಷ್ಠೆ ಜಾಗತಿಕ ಮಟ್ಟದಲ್ಲಿ ಹೆಚ್ಚುವುದನ್ನು ಖಾತರಿ ಪಡಿಸುವುದರಲ್ಲಿ ಪ್ರಧಾನಿ ನರೇಂದ್ರ ಮೋದಿ ಸಾಧನವಾಗಿರುವುದರಿಂದ ಭಾರತದ ಜನತೆ ಅವರು ದೇಶವನ್ನು ಮತ್ತಷ್ಟು ಮುಂದಕ್ಕೊಯ್ಯುವುದನ್ನು ಬಯಸುತ್ತಿದ್ದಾರೆ ಎಂದು ರಾಜನಾಥ್ ಸಿಂಗ್ ಅಭಿಪ್ರಾಯ ಪಟ್ಟಿದ್ದಾರೆ.