ಹರ್ಯಾಣದಲ್ಲಿ ಅಭ್ಯರ್ಥಿಗಳ ಮೊದಲ ಪಟ್ಟಿಯ ಬಳಿಕ ಬಿಜೆಪಿಯಲ್ಲಿ ಬಂಡಾಯದ ದಳ್ಳುರಿ: ಇಬ್ಬರು ಸಚಿವರ ರಾಜೀನಾಮೆ
ಪಕ್ಷ ತೊರೆದ ಆರು ನಾಯಕರು
ಸಾಂದರ್ಭಿಕ ಚಿತ್ರ
ಚಂಡೀಗಢ: ಬಿಜೆಪಿಯು ಹರ್ಯಾಣ ವಿಧಾನಸಭಾ ಚುನಾವಣೆಗೆ 67 ಅಭ್ಯರ್ಥಿಗಳ ಪ್ರಥಮ ಪಟ್ಟಿ ಬಿಡುಗಡೆ ಮಾಡಿದ ಮರುದಿನವೇ ರಾಜ್ಯ ಬಿಜೆಪಿ ಘಟಕದಲ್ಲಿ ಭಿನ್ನಮತ ಭುಗಿಲೆದ್ದಿದ್ದು, ಕನಿಷ್ಠ ಪಕ್ಷ ಆರು ಮಂದಿ ನಾಯಕರು ಪಕ್ಷ ತೊರೆದಿದ್ದಾರೆ. ನಯಾಬ್ ಸಿಂಗ್ ಸೈನಿ ಸರಕಾರದಲ್ಲಿ ಸಚಿವರಾಗಿರುವ ಇಬ್ಬರು ತಮ್ಮ ಹುದ್ದೆಗಳಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ಮಾಜಿ ಸಚಿವೆ ಸಾವಿತ್ರಿ ಜಿಂದಾಲ್ ಸೇರಿದಂತೆ ಕೆಲವು ನಾಯಕರು ಬಂಡಾಯ ಸಾರಿದ್ದಾರೆ. ಅಲ್ಲದೆ, ಬಿಜೆಪಿ ಶಾಸಕ ಲಕ್ಷ್ಮಣ್ ನಾಪ ದಿಲ್ಲಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಪಕ್ಷದೊಳಗೆ ಅಸಮಾಧಾನ ಭುಗಿಲೆದ್ದಿರುವ ಬೆನ್ನಿಗೇ, ಮುಖ್ಯಮಂತ್ರಿ ಸೈನಿ ಅವರ ಪೈಕಿ ಓರ್ವ ನಾಯಕರನ್ನು ಸಂಪರ್ಕಿಸಿದ್ದು, ಪಕ್ಷವು ಅವರೊಂದಿಗೆ ಮಾತುಕತೆ ನಡೆಸಲಿದೆ ಎಂದು ಭರವಸೆ ನೀಡಿದ್ದಾರೆ ಎಂದು ವರದಿಯಾಗಿದೆ.
ಪಕ್ಷದ ವಿರುದ್ಧ ಬಂಡಾಯ ಸಾರಿರುವವರ ಪೈಕಿ ರಾಜ್ಯ ಇಂಧನ ಸಚಿವ ರಂಜಿತ್ ಸಿಂಗ್ ಚೌತಾಲ, ಸಾಮಾಜಿಕ ನ್ಯಾಯ ರಾಜ್ಯ ಸಚಿವ ಬಿಶಂಬರ್ ಸಿಂಗ್ ಬಾಲ್ಮೀಕಿ ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ನಾಪರಂತೆಯೆ ಮಾಜಿ ಸಚಿವರಾಗಿರುವ ಬಿಜೆಪಿ ಒಬಿಸಿ ಮೋರ್ಚಾದ ರಾಜ್ಯಾಧ್ಯಕ್ಷ ಕರಣ್ ದೇವ್ ಕಂಬೋಜ್, ಮಾಜಿ ರಾಜ್ಯ ಸಚಿವರಾದ ಕವಿತಾ ಜೈನ್ ಮತ್ತು ಸಾವಿತ್ರಿ ಜಿಂದಾಲ್ ಕೂಡಾ ಪಕ್ಷ ತೊರೆದಿದ್ದಾರೆ.
ಸೋನಿಪತ್ ಜಿಲ್ಲೆಯಿಂದ ತಮ್ಮನ್ನು ಕಣಕ್ಕಿಳಿಸಬೇಕು ಎಂದು ಕವಿತಾ ಜೈನ್ ಎರಡು ದಿನಗಳ ಗಡುವು ನೀಡಿದ್ದರೆ, ಸಾವಿತ್ರಿ ಜಿಂದಾಲ್ ಹಿಸಾರ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಬೆದರಿಕೆ ಒಡ್ಡಿದ್ದಾರೆ. ಈ ಕ್ಷೇತ್ರದಿಂದ ಹಾಲಿ ಶಾಸಕ ಹಾಗೂ ಸಚಿವ ಡಾ. ಕಮಲ್ ಗುಪ್ತ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ.