ಲೋಕಸಭಾ ಚುನಾವಣೆಗೂ ಮುಂಚೆ ರಾಜ್ಯಗಳಿಗೆ ನೂತನ ಮುಖ್ಯಸ್ಥರನ್ನು ನೇಮಿಸಿದ ಬಿಜೆಪಿ
ಸಾಂದರ್ಭಿಕ ಚಿತ್ರ Photo: PTI
ಹೊಸದಿಲ್ಲಿ: 2024ರ ಲೋಕಸಭಾ ಚುನಾವಣೆಗೆ ಹಾಗೂ ವಿಧಾನಸಭಾ ಚುನಾವಣೆಗೆ ತಯಾರಾಗುವ ನಿಟ್ಟಿನಲ್ಲಿ ಭಾರತೀಯ ಜನತಾ ಪಕ್ಷ ಇಂದು ಹಲವು ರಾಜ್ಯಗಳಿಗೆ ಹೊಸ ಮುಖ್ಯಸ್ಥರನ್ನು ಘೋಷಿಸಿದೆ.
ಸಂಸದ ಮತ್ತು ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ ಅವರು ಬಂಡಿ ಸಂಜಯ್ ಕುಮಾರ್ ಬದಲಿಗೆ ತೆಲಂಗಾಣದಲ್ಲಿ ಪಕ್ಷವನ್ನು ಮುನ್ನಡೆಸಲಿದ್ದಾರೆ. ತೆಲಂಗಾಣದ ಮೊದಲ ಹಣಕಾಸು ಸಚಿವರಾಗಿ ಸೇವೆ ಸಲ್ಲಿಸಿದ ಬಿಜೆಪಿ ಶಾಸಕ ಎಟೆಲಾ ರಾಜೇಂದರ್ ಅವರು ಮುಂಬರುವ ತೆಲಂಗಾಣ ವಿಧಾನಸಭಾ ಚುನಾವಣೆಗೆ ಬಿಜೆಪಿಯ ರಾಜ್ಯ ಚುನಾವಣಾ ನಿರ್ವಹಣಾ ಸಮಿತಿಯ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.
ತೆಲುಗು ದೇಶಂ ಪಕ್ಷದ ಸಂಸ್ಥಾಪಕ ಮತ್ತು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್ಟಿ ರಾಮರಾವ್ ಅವರ ಪುತ್ರಿ ದಗ್ಗುಬಾಟಿ ಪುರಂದೇಶ್ವರಿ ಅವರನ್ನು ಆಂಧ್ರಪ್ರದೇಶ ಬಿಜೆಪಿ ಅಧ್ಯಕ್ಷರಾಗಿ ನೇಮಿಸಲಾಗಿದೆ.
ಪಂಜಾಬ್ನಲ್ಲಿ ರಾಷ್ಟ್ರೀಯತೆ, ಏಕತೆ ಮತ್ತು ಸಹೋದರತ್ವವನ್ನು ಬೆಂಬಲಿಸುವುದಾಗಿ ಹೇಳಿಕೊಂಡು ಕಳೆದ ವರ್ಷ ಮೇ ತಿಂಗಳಲ್ಲಿ ಕಾಂಗ್ರೆಸ್ನಿಂದ ಪಕ್ಷಾಂತರವಾಗಿದ್ದ ಮಾಜಿ ಸಂಸದ ಸುನಿಲ್ ಕುಮಾರ್ ಜಾಖರ್ ಪಂಜಾಬ್ನಲ್ಲಿ ಪಕ್ಷವನ್ನು ಮುನ್ನಡೆಸಲಿದ್ದಾರೆ.
ಜಾರ್ಖಂಡ್ನ ಮೊದಲ ಮುಖ್ಯಮಂತ್ರಿ ಮತ್ತು ಪ್ರಸ್ತುತ ಜಾರ್ಖಂಡ್ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಬಾಬುಲಾಲ್ ಮರಾಂಡಿ ಅವರು ಬಿಜೆಪಿ ಜಾರ್ಖಂಡ್ ಅಧ್ಯಕ್ಷರಾಗಿದ್ದಾರೆ.
ತೆಲಂಗಾಣ ರಾಜ್ಯ ರಚನೆಗೂ ಮುನ್ನ ಸಂಯುಕ್ತ ಆಂಧ್ರಪ್ರದೇಶದ ಕೊನೆಯ ಮುಖ್ಯಮಂತ್ರಿಯಾಗಿದ್ದ ಕಿರಣ್ ಕುಮಾರ್ ರೆಡ್ಡಿ ಅವರನ್ನು ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ನೇಮಿಸಲಾಗಿದೆ.