ಬಿಜೆಪಿಗೂ ಹಿಂದೂ ಧರ್ಮಕ್ಕೂ ಸಂಬಂಧವಿಲ್ಲ
ಪ್ಯಾರಿಸ್ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ವಾಗ್ದಾಳಿ
ರಾಹುಲ್ ಗಾಂಧಿ| Photo: PTI
ಹೊಸದಿಲ್ಲಿ: ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಅದರ ಮಾತೃಸಂಸ್ಥೆ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS)ದ ವಿರುದ್ಧ ರವಿವಾರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ‘‘ಈ ಎರಡು ಸಂಸ್ಥೆಗಳಿಗೂ ಹಿಂದೂ ಧರ್ಮಕ್ಕೂ ಯಾವುದೇ ಸಂಬಂಧವಿಲ್ಲ’’ ಎಂದು ಹೇಳಿದರು.
ಫ್ರಾನ್ಸ್ ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘‘ಬಿಜೆಪಿ ಏನು ಮಾಡುತ್ತಿದೆಯೋ ಅದರಲ್ಲಿ ಹಿಂದೂಗಳಿಗೆ ಬೇಕಾಗಿರುವುದು ಏನೂ ಇಲ್ಲ. ನಾನು ಭಗವದ್ಗೀತೆ, ಹಲವಾರು ಉಪನಿಷತ್ ಗಳು ಮತ್ತು ಹಲವು ಹಿಂದೂ ಧಾರ್ಮಿಕ ಗ್ರಂಥಗಳನ್ನು ಓದಿದ್ದೇನೆ. ಖಂಡಿತವಾಗಿಯೂ ಬಿಜೆಪಿಗೂ ಹಿಂದೂ ಧರ್ಮಕ್ಕೂ ಯಾವುದೇ ಸಂಬಂಧವಿಲ್ಲ ಎನ್ನುವುದನ್ನು ನಾನು ಇದರಿಂದ ಕಂಡುಕೊಂಡಿದ್ದೇನೆ’’ ಎಂದು ಅವರು ಹೇಳಿದರು.
‘‘ನಮಗಿಂತ ದುರ್ಬಲ ವ್ಯಕ್ತಿಗಳನ್ನು ಹೆದರಿಸಬೇಕು ಅಥವಾ ಅವರಿಗೆ ಹಾನಿ ಮಾಡಬೇಕು ಎನ್ನುವುದನ್ನು ನಾನು ಯಾವುದೇ ಹಿಂದೂ ಪುಸ್ತಕದಲ್ಲಿ ಓದಿಲ್ಲ ಅಥವಾ ಯಾರೇ ತಿಳುವಳಿಕಸ್ಥ ಹಿಂದೂ ಹೇಳುವುದನ್ನು ಕೇಳಿಲ್ಲ. ಈ ‘ಹಿಂದೂ ರಾಷ್ಟ್ರೀಯವಾದಿ’ ಎನ್ನುವ ಕಲ್ಪನೆ, ಪದ ತಪ್ಪು. ಅವರು ‘ಹಿಂದೂ ರಾಷ್ಟ್ರೀಯವಾದಿ’ಗಳಲ್ಲ. ಅವರಿಗೂ ಹಿಂದೂ ಧರ್ಮಕ್ಕೂ ಯಾವುದೇ ಸಂಬಂಧವಿಲ್ಲ’’ ಎಂದು ರಾಹುಲ್ ಹೇಳಿದರು.
ಪ್ಯಾರಿಸ್ ನಲ್ಲಿರುವ ಸಯನ್ಸಸ್ ಪಿಒ ಯುನಿವರ್ಸಿಟಿಯಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅವರು, ‘‘ಸರಕಾರ ಯಾವುದೇ ಬೆಲೆ ತೆತ್ತಾದರೂ ಅಧಿಕಾರ ಹಿಡಿಯಲು ಹೊರಟಿದೆ’’ ಎಂದು ಆರೋಪಿಸಿದರು.‘‘ಕೆಲವರು ಮಾತ್ರ ಪ್ರಾಬಲ್ಯ ಹೊಂದಿರಬೇಕು ಎಂದು ಅವರು ಬಯಸುತ್ತಾರೆ. ಅದೇ ಅವರಿಗೆ ಬೇಕಾಗಿರುವುದು’’ ಎಂದು ಕಾಂಗ್ರೆಸ್ ನಾಯಕ ನುಡಿದರು.
‘‘ಹಿಂದುತ್ವ ಶಕ್ತಿಗಳು ಯುವಕರನ್ನು ತೀವ್ರಗಾಮಿಗಳನ್ನಾಗಿಸುತ್ತಿರುವುದಕ್ಕೆ’’ ಸಂಬಂಧಿಸಿದ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸುತ್ತಿದ್ದರು.