ʼಬಿಜೆಪಿಯದ್ದು ಡಬಲ್ ಎಂಜಿನ್ ಅಲ್ಲ, ಡಬಲ್ ಎಡವಟ್ಟು ಸರಕಾರʼ: ಅಖಿಲೇಶ್ ಯಾದವ್ ವ್ಯಂಗ್ಯ
ಅಖಿಲೇಶ್ ಯಾದವ್ | PC : PTI
ಲಕ್ನೊ: ಕೇಂದ್ರ ಮತ್ತು ಉತ್ತರಪ್ರದೇಶದಲ್ಲಿನ ಬಿಜೆಪಿ ಸರಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್, ಅವು ʼಡಬಲ್ ಎಂಜಿನ್ ಸರಕಾರಗಳಲ್ಲ; ಡಬಲ್ ಎಡವಟ್ಟು ಸರಕಾರʼ ಎಂದು ವ್ಯಂಗ್ಯವಾಡಿದ್ದಾರೆ.
ವಂದೇಭಾರತ್ ರೈಲು ದಾರಿ ತಪ್ಪಿರುವ ಘಟನೆಯ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿಯೂ ಆದ ಅಖಿಲೇಶ್ ಯಾದವ್, “ವಂದೇ ಭಾರತ್ ದಾರಿ ತಪ್ಪಿದೆ. ಗೋವಾಗೆ ಹೋಗಬೇಕಿತ್ತು ಆದರೆ, ಅದು ಕಲ್ಯಾಣ್ ಗೆ ತಲುಪಿತು ಎಂದು ವ್ಯಂಗ್ಯವಾಡಿದ್ದಾರೆ.
ರೈಲಿನ ಸುದ್ದಿ ಚಿತ್ರಗಳೊಂದಿಗೆ ಪೋಸ್ಟ್ ಮಾಡಿರುವ ಅವರು, “ಬಿಜೆಪಿ ಡಬಲ್ ಎಂಜಿನ್ ಸರಕಾರವಲ್ಲ; ಬದಲಿಗೆ ಡಬಲ್ ಎಡವಟ್ಟು ಸರಕಾರ. ಬಿಜೆಪಿಯು ದೇಶದ ಎಂಜಿನ್ ಅನ್ನೂ ಹಳಿ ತಪ್ಪಿಸಿದೆ” ಎಂದೂ ಅವರು ಲೇವಡಿ ಮಾಡಿದ್ದಾರೆ.
ಸೋಮವಾರ ಬೆಳಗ್ಗೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ದಿವಾ ರೈಲು ನಿಲ್ದಾಣದಲ್ಲಿ ಉಂಟಾದ ತಾಂತ್ರಿಕ ಸಮಸ್ಯೆಗಳಿಂದ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ನಿಂದ ಮಡಗಾಂವ್ ಗೆ ತಲುಪಬೇಕಿದ್ದ ವಂದೇಭಾರತ್ ರೈಲು, ತನ್ನ ನಿಯಮಿತ ಮಾರ್ಗವನ್ನು ಬದಲಿಸಿ, 90 ನಿಮಿಷಗಳಷ್ಟು ವಿಳಂಬವಾಗಿ ಗೋವಾ ತಲುಪಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಂದೇಭಾರತ್ ರೈಲು ಕೊಂಕಣಕ್ಕೆ ತೆರಳುವ ರೈಲುಗಳು ಬಳಸುವ ದಿವಾ-ಪನ್ವೇಲ್ ರೈಲ್ವೆ ಮಾರ್ಗದ ಮೂಲಕ ಪನ್ವೇಲ್ ರೈಲು ನಿಲ್ದಾಣದತ್ತ ತೆರಳುವ ಬದಲು, ಕಲ್ಯಾಣ್ ಮಾರ್ಗದತ್ತ ಚಲಿಸಿತ್ತು.